ಜಿಲ್ಲೆ

ಪ್ರಥಮ ಬಹುಮಾನ ಪಡೆದ ಹುಲಿವಾಲ ರಾಮೇಗೌಡ

ಹೊಳೆನರಸೀಪುರ: ವೈಷ್ಣವಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೋಮವಾರ ಪಟ್ಟಣದ ಗಣಪತಿ ಪೆಂಡಾಲ್ ಮುಂಭಾಗ ಆಯೋಜಿಸಿದ್ದ ರಾಗಿಮುದ್ದೆ -ಹುರಳಿಸಾರು ಬೆಣ್ಣೆ ಊಟ ಮಾಡುವ ಸ್ಪರ್ಧೆ ಸಾರ್ವಜನಿಕರ ಗಮನ ಸೆಳೆಯಿತು.

ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 6 ಪುರುಷರು 8 ಮಹಿಳೆಯರು ಭಾಗವಹಿಸಿದ್ದರು. ಎರಡೂ ತಂಡಗಳಿಗೆ 5 ನಿಮಿಷ ಕಾಲಾವಧಿ ನೀಡಿ 250 ಗ್ರಾಂ ತೂಕದ ಮುದ್ದೆ ಹುರುಳಿ ಸಾರು ನೀಡಲಾಗಿತ್ತು. ಪುರುಷರ ವಿಭಾಗದಲ್ಲಿ ಹುಲಿವಾಲ ಗ್ರಾಮದ ರಾಮೇಗೌಡ 5 ನಿಮಿಷದಲ್ಲಿ 250 ಗ್ರಾಂ ತೂಕದ ಆರೂವರೆ ಮುದ್ದೆ ಉಂಡು ಮೊದಲ ಬಹುಮಾನ ಪಡೆದರೆ, ಹುಚ್ಚನಕೊಪ್ಪಲು ಮಹೇಶ ಐದೈವರೆ ಮುದ್ದೆ ಉಂಡು ದ್ವಿತೀಯ ಬಹುಮಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಕಲ್ಲುಬ್ಯಾಡರಹಳ್ಳಿಯ ಪದ್ಮಾವತಿ 250 ಗ್ರಾಂ ತೂಕದ 6, ಪಟ್ಟಣದ ವಿನುತಾ 4 ಮುದ್ದೆ ಉಂಡು ದ್ವಿತೀಯ ಬಹುಮಾನ ಪಡೆದರು. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಹೆಚ್ಚು ಮುದ್ದೆ ಉಂಡ ಮೊದಲ ನಾಲ್ವರಿಗೆ ನಗದು ಬಹುಮಾನ, ಮಹಿಳೆಯರಿಗೆ ನಗದು ಬಹುಮಾನದೊಂದಿಗೆ ರೇಣುಕೇಶ್ ಸೀರೆಗಳನ್ನು ಬಹುಮಾನವಾಗಿ ನೀಡಿದರು.

ಟ್ರಸ್ಟ್‌ನ ಕಿಟ್ಟಿ, ಕಾಮಾಕ್ಷಿ, ಸುದರ್ಶನ್ ಬಾಬು, ರೇಣುಕೇಶ್, ಅಶೋಕ್, ಈಶ್ವರ್, ಹರಿಣಾಕ್ಷಿ, ಕುಮುದಾ, ಮಂಜುಳಾ, ರವೀಶ, ಲಕ್ಷ್ಮೀ ಇತರರು ನೇತೃತ್ವ ವಹಿಸಿದ್ದರು.