ಹಾಸನ: ಜಿಲ್ಲೆಗೆ ರೈಲುಗಳ ಮೂಲಕ ಮಾದಕ ಪದಾರ್ಥ ಸರಬರಾಜಾಗುತ್ತಿರುವ ಮಾಹಿತಿಯಿದ್ದು ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಸಂಸದ ಶ್ರೇಯಸ್ ಎಂ.ಪಟೇಲ್ ಹರಿಹಾಯ್ದರು.
ನಗರದ ಜಿ.ಪಂ. ಹೊಯ್ಸಳ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಥಮ ದಿಶಾ (ಮೊದಲನೇ/ಎರಡನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ) ಸಭೆಯ ಆರಂಭದಲ್ಲೇ ಡ್ರಗ್ಸ್ ಹಾವಳಿ ಬಗ್ಗೆ ಪ್ರಸ್ತಾಪಿಸಿದ ಅವರು ರೈಲ್ವೆ ಪೊಲೀಸರ ಕಾರ್ಯವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಹಾಸನ ಜಿಲ್ಲೆಗೆ ರೈಲುಗಳ ಮೂಲಕ ಡ್ರಗ್ಸ್ ಪೂರೈಕೆಯಾಗುತ್ತಿದೆ. ಹಳ್ಳಿಹಳ್ಳಿಗಳಲ್ಲಿ ಯುವಕರಿಗೆ ಡ್ರಗ್ಸ್ ಸಿಗುತ್ತಿದೆ. ಡ್ರಗ್ಸ್ ಸೇವಿಸಿ ಯುವಕರು ಹಾಳಾಗುತ್ತಿದ್ದಾರೆ. ರೈಲ್ವೆ ಪೊಲೀಸರು ಏನು ಮಾಡುತ್ತಿದ್ದಾರೆ. ರೈಲ್ವೆ ಪೊಲೀಸರು, ಜಿಲ್ಲಾ ಪೊಲೀಸರ ಜತೆಗೂಡಿ ಕೆಲಸ ಮಾಡಬೇಕು. ಡ್ರಗ್ಸ್ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಡ್ರಗ್ಸ್ ಪೆಡ್ಲರ್‌ಗಳನ್ನು ಮೊದಲು ಬಂಧಿಸಿ, ಯಾರ ಒತ್ತಡಕ್ಕೂ ಮಣಿಯಬೇಡಿ ಎಂದು ತಾಕೀತು ಮಾಡಿ, ಮುಂದೆ ಪೊಲಿಸ್ ಇಲಾಖೆ ಹಾಗೂ ರೈಲ್ವೆ ಪೊಲೀಸರು ಜಂಟಿ ಸಭೆ ನಡೆಸಿ ಎಂದು ಸಲಹೆ ನೀಡಿದರು.
ಡ್ರಗ್ಸ್ ಪೂರೈಸುತ್ತಿರುವ ಪೆಡ್ಲರ್‌ಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ. ಡ್ರಗ್ಸ್ ಜತೆಗೆ ಮಟ್ಕಾ ದಂಧೆ ನಡೆಯುತ್ತಿದೆ. ಹಾಸನದಲ್ಲಿ ಹೆಚ್ಚು ಡ್ರಗ್ಸ್ ಹಾಗೂ ಮಟ್ಕಾ ದಂಧೆ ನಡೆಯುತ್ತಿದೆ. ಮುಂದೆ ಇದು ರಾಜ್ಯದಲ್ಲಿ ದೊಡ್ಡ ವಿಚಾರ ಆಗಲಿದೆ. ಡ್ರಗ್ಸ್ ಮಾರಾಟ ಮಾಡುವವರಷ್ಟೇ ಅಲ್ಲದೆ ಸೇವನೆ ಮಾಡುವವರ ಮೇಲೂ ಕೇಸ್ ಹಾಕಿ ಎಂದು ಹಾಸನ ಎಸ್ಪಿಗೆ ಸೂಚನೆ ಕೊಟ್ಟರು.
ಅರಣ್ಯ ಇಲಾಖೆಯಿಂದ ರೈತರಿಗೆ ಯಾವ ತೊಂದರೆ ಆಗಬಾರದು. ಭೂಮಿ ಬಗ್ಗೆ ಎಲ್ಲ ಕ್ಲಿಯರ್ ಆಗಿದ್ದರೂ ಮತ್ತೆ ಸಮಸ್ಯೆ ಕೊಡಲಾಗುತ್ತಿದೆ. ಏನೇ ಸಮಸ್ಯೆ ಇದ್ದರೂ ತಿಳಿಸಿ. ಕೃಷಿಯಲ್ಲಿ ರೈತರಿಗೆ ಯಾವ ರೀತಿ ಸೌಲಭ್ಯ ಕೊಡಲಾಗುತ್ತಿದೆ ಸೇರಿದಂತೆ ಇತರೆ ಇಲಾಖೆಗಳ ಕಾರ್ಯವೈಖರಿ ಬಗ್ಗೆ ಸಂಸದರು ಮಾಹಿತಿ ಕೇಳಿ ನಂತರ ಸಲಹೆ ಸೂಚನೆ ನೀಡಿದರು.
ನಿಗಮ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಅರಣ್ಯ ಇಲಾಖೆ ಬಳಿ ಯಾವ ಅಳತೆ ಮತ್ತು ದಾಖಲೆ ಇಲ್ಲದಿದ್ದರೂ ಕೊನೆಗೆ ಒಂದು ನಕ್ಷೆ ಇಟ್ಟುಕೊಂಡು ಇದು ನಮ್ಮ ಅರಣ್ಯಕ್ಕೆ ಸೇರಿದೆ ಎಂದು ಹಿಂಸೆ ಕೊಡಲಾಗುತ್ತಿದೆ. ನಾನು ಕೂಡ ಕರ್ನಾಟಕದಲ್ಲಿ ವಾಸ ಮಾಡುತ್ತಿದ್ದೇನೆ. ಅಷ್ಟೊಂದು ಎಕರೆ ಭೂಮಿಯನ್ನು ಅಕ್ರಮ ಮಾಡುವಾಗ ನೀವು ಎಲ್ಲಿ ಹೋಗಿದ್ದೀರಿ? ಅವತ್ತೆ ತಕರಾರು ಹಾಕಿದ್ದರೇ ಸರಿಯಾಗಿತ್ತು. ಕ್ರಷರ್ ಹಾಕಿದ ಮೇಲೆ ಅದು ಅರಣ್ಯ ಇಲಾಖೆ ಜಾಗ ಎನ್ನುತ್ತಿದ್ದೀರಿ. ಇಡೀ ದೇಶದಲ್ಲಿ ನಿಮ್ಮಿಂದ ಯಾವ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಅರಣ್ಯ ಇಲಾಖೆ ಇದ್ದರೇ ಮಳೆ ಬರುತ್ತದೆ ಎಂದು ಹಿಂದೆಯೇ ಪ್ರೈಮರಿ ಶಾಲೆಯಲ್ಲಿ ನಮಗೆ ಹೇಳಿಕೊಟ್ಟಿದ್ದಾರೆ. ಆದರೆ ನೀವು ವಿರುದ್ಧವಾಗಿದ್ದೀರಾ.. ಚಿರತೆ, ಆನೆ, ಕರಡಿ ವಿಚಾರದಲ್ಲಿ ಅರಣ್ಯ ಅಧಿಕರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಆನೆಗಳು ಹೊಟ್ಟೆ ಹಸಿವು ಆದಾಗ ಏನು ತಿನ್ನಬೇಕು? ಆನೆ ಏನು ತಿನ್ನುತ್ತದೆ ಆ ಭಾಗದಲ್ಲಿ ಅದನ್ನು ಬೆಳೆಸುವ ಕೆಲಸ ಅರಣ್ಯ ಇಲಾಖೆ ಅಧಿಕಾರಿಗಳು ಮಾಡಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ, ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಇತರರು ಉಪಸ್ಥಿತರಿದ್ದರು.