ಬೀದರ್: ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಉಚಿತವಾಗಿ ವಿತರಣೆ ಮಾಡುತ್ತಿದೆ. ಇದರ ಜತೆಯಲ್ಲಿ ಚುನಾವಣೆ ಪೂರ್ವ ಘೋಷಣೆ ಮಾಡಿದಂತೆ ರಾಜ್ಯ ಸರ್ಕಾರ ಪ್ರತ್ಯೇಕವಾಗಿ 10 ಕೆಜಿ ಅಕ್ಕಿ ಫ್ರೀ ವಿತರಣೆ ಮಾಡಬೇಕೆಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಒತ್ತಾಯಿಸಿದರು.
ಭರವಸೆಯಂತೆ ಸಿಎಂ ಸಿದ್ದರಾಮಯ್ಯ ನಡೆದುಕೊಳ್ಳಬೇಕು. ಕೇಂದ್ರ ನೀಡುತ್ತಿರುವ 5 ಕೆಜಿ ಜತೆಗೆ ಇನ್ನೂ 5 ಕೆಜಿ ಸೇರಿಸಿ 10 ಕೆಜಿ ಉಚಿತ ವಿತರಣೆಗೆ ಸರ್ಕಾರ ಮುಂದಾಗಿರುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರ ಪ್ರತ್ಯೇಕವಾಗಿ 10 ಕೆಜಿ ಉಚಿತ ನೀಡಬೇಕು. ಆದರೆ ಕೊಟ್ಟ ಮಾತಿನಂತೆ ನಡೆಯಲಾಗದ ಇವರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವುದು ಸರಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ 9 ವರ್ಷ ಪೂರೈಸಿರುವುದು ಹಾಗೂ ಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಏಳು ತಂಡಗಳಲ್ಲಿ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಕಾರ್ಯಕರ್ತರ ಸಮಾವೇಶ, ಪ್ರಬುದ್ಧರ ಸಭೆ, ಸಾಮಾಜಿಕ ಜಾಲತಾಣ ಪ್ರತಿನಿಧಿಗಳ ಸಮಾರಂಭ, ಮನೆ-ಮನೆ ಭೇಟಿ ಸೇರಿ ನಾನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪೂರ್ಣಾವ ಮುಖ್ಯಮಂತ್ರಿ ಅಥವಾ ಡಿಕೆಶಿ ನಡುವೆ ಒಪ್ಪಂದ ಆಗಿದೆ ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು ಎಂದ ಖೂಬಾ, ಮುಂಗಾರು ಹಂಗಾಮಿಗಾಗಿ ರಾಜ್ಯದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಬೇಡಿಕೆಗಿಂತ ಹೆಚ್ಚು ಎಲ್ಲ ಜಿಲ್ಲೆಗಳಲ್ಲಿ ದಾಸ್ತಾನು ಇದೆ ಎಂದು ಹೇಳಿದರು.
ಜೂ.27ರಂದು ದೇಶಾದ್ಯಂತ 10 ಲಕ್ಷ ಬೂತ್ ನಲ್ಲಿ ಕಾರ್ಯಕರ್ತರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚೂವಲ್ ಮೂಲಕ ಸಂವಾದ ಮಾಡಲಿದ್ದಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಮತ್ತೆ ಮೋದಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್ ಮಾತನಾಡಿ, ಬರುವ ಲೋಕಸಭೆ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಪ್ರೋತ್ಸಾಹ ನೀಡಲು ಜೂ.22ರಂದು ನಗರದಲ್ಲಿ ಜಿಲ್ಲಾ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ ಎಂದರು.
ಸಮಾವೇಶ ಮತ್ತು ಜಿಲ್ಲಾ ಪ್ರವಾಸಕ್ಕಾಗಿ ರಾಜ್ಯ ನಾಯಕರ ನೇತೃತ್ವದಲ್ಲಿ 7 ತಂಡಗಳನ್ನು ರಚಿಸಲಾಗಿದೆ. ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ತಂಡ ಇಲ್ಲಿಗೆ ಆಗಮಿಸಲಿದೆ. ಅಂದು ಬೆಳಗ್ಗೆ 10ಕ್ಕೆ ಇಲ್ಲಿನ ಪ್ರತಾಪನಗರದ ಬೆಲ್ದಾಳೆ ಫಂಕ್ಶನ್ ಹಾಲ್ ನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಮಂಡಲ್ ನಿಂದ ಸುಮಾರು 30 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಪ್ರಮುಖರಾದ ಬಾಬು ವಾಲಿ, ಅರಹಂತ ಸಾವಳೆ, ರಾಜಶೇಖರ ನಾಗಮೂರ್ತಿ, ಶ್ರೀನಿವಾಸ ಚೌಧರಿ, ರಾಜಕುಮಾರ ನೆಮತಾಬಾದ್ ಇದ್ದರು.