ಜಿಲ್ಲೆ

ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವು

ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ ಹಾಗು ಹಾಸನ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಗಂಡಸಿ ಹೋಬಳಿ ಗೊಲ್ಲರಹಟ್ಟಿ ಗೇಟ್ ಸಮೀಪ ಪಂಚರ್ ಆಗಿದ್ದ ಕಾರಿನ ಟೈರ್ ಬದಲಾಯಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟಿದ್ದಾನೆ. ಬೆಂಗಳೂರು ಜಿಲ್ಲೆ ಹೊಸಕೋಟೆ ನಿವಾಸಿ ಮುನಿಸ್ವಾಮಿಗೌಡ (49) ಮೃತ ದುರ್ದೈವಿ. ಮಂಗಳೂರಿನಲ್ಲಿದ್ದ ತಮ ಪುತ್ರಿಯನ್ನು ನೋಡಿಕೊಂಡು ಬರಲು ಕಾರಿನಲ್ಲಿ ತೆರಳಿದ್ದ ಅವರು ತುಮಕೂರು ಮಾರ್ಗವಾಗಿ ಊರಿಗೆ ವಾಪಾಸ್ಸಾಗುತ್ತಿದ್ದರು. ರಾತ್ರಿ 3 ಗಂಟೆ ಸಮಯದಲ್ಲಿ ಟೈರ್ ಪಂಚರ್ ಆಗಿದ್ದು, ಚಕ್ರ ಬದಲಾಯಿಸುತ್ತಿದ್ದಾಗ ವೇಗವಾಗಿ ಬಂದ ಲಾರಿ ವ್ಯಕ್ತಿ ಮೇಲೆ ಹರಿದಿದೆ. ತೀವ್ರ ಸ್ವರೂಪದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಅರೆಕಲ್ಲು ಹೊಸಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಇಂಜಿನೀಯರಿಂಗ್ ವರ್ಕ್ ಸಮೀಪ ನಡೆದಿದೆ. ಕುಪ್ಪಳ್ಳಿ ಗ್ರಾಮದ ಕೆ.ವಿ.ನಾಗಾರ್ಜುನ (26) ಮೃತ ಯುವಕ. ಆರ್‌ಟಿಓ ಕಚೇರಿ ಮುಂಭಾಗ ಕಂಪ್ಯೂಟರ್ ಕೇಂದ್ರ ತೆರೆದಿದ್ದ ಯುವಕ ಕೆಲಸ ಮುಗಿಸಿ ರಾತ್ರಿ 9.30ರ ಸಮಯದಲ್ಲಿ ಮನೆಗೆ ತೆರಳುತ್ತಿದ್ದಾಗ ಎದುರುಗಡೆಯಿಂದ ಬಂದ ಟ್ಯಾಂಕರ್ ಡಿಕ್ಕಿಯಾಗಿ ಸ್ಥಳದಲ್ಲೆ? ಮೃತಪಟ್ಟಿದ್ದಾನೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.