ಜಿಲ್ಲೆ

ವಾಣಿಜ್ಯ ಉದ್ದಿಮೆಗಳಿಗೆ ಪ್ರತ್ಯೇಕ ತಂಬಾಕು ಮಾರಾಟ ಪರವಾನಗಿ

ಚಿತ್ರದುರ್ಗ: ವಾಣಿಜ್ಯ ಉದ್ದಿಮೆ ಪರವಾನಗಿಯೊಂದಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಎಲ್ಲ ಅಂಗಡಿಗಳು ತಂಬಾಕಿಗೆ ಪ್ರತ್ಯೇಕ ಪರವಾನಗಿ ಪಡೆದುಕೊಳ್ಳಬೇಕು ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುವ ಶೇ.90 ಅಂಗಡಿಗಳಿಗೆ ತಿಂಗಳ ಒಳಗೆ ಪ್ರತ್ಯೇಕ ಪರವಾನಗಿ ನೀಡುವ ಗುರಿ ಸಾಧಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಳೆದ ಸಭೆಯ ಸೂಚನೆಯಂತೆ ನಿರೀಕ್ಷಿತ ಮಟ್ಟದಲ್ಲಿ ಈ ಕೆಲಸವಾಗಿಲ್ಲ. ಕೋಟ್ಪಾ ಕಾಯ್ದೆಯಡಿ ಪರವಾನಗಿ ಕಡ್ಡಾಯ. ಬಾರ್ ಅಂಡ್ ರೆಸ್ಟೋರೆಂಟ್, ಟೀ ಹಾಗೂ ಪಾನ್‌ಶಾಪ್‌ಗಳಿಗೆ ವ್ಯಾಪಾರ ಪರವಾನಗಿ ಜತೆಯಲ್ಲೇ ಪ್ರತ್ಯೇಕ ಪರವಾನಗಿಗೆ ಷರತ್ತು ವಿಧಿಸಬೇಕೆಂದ ಅವರು, ಗಡುವಿನೊಳಗೆ ಗುರಿ ಸಾಧಿಸದಿದ್ದರೆ ಕ್ರಮದ ಎಚ್ಚರಿಕೆ ನೀಡಿದರು.

ಶಾಲಾ ಕಾಲೇಜು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಾಗೂ ವ್ಯಾಪಾರ ಮಳಿಗೆಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್‌ಗಳಲ್ಲಿ ತಂಬಾಕು ಸೇವನೆ ನಿಷೇಧ ಹಾಗೂ ಕೋಟ್ಪಾ ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಕುರಿತು ಧೃಡೀಕರಣ ಪಡೆಯುವಂತೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ನಿಯಮ ಮೀರಿ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವ ವ್ಯಾಪಾರಿಗಳ ಬಾಡಿಗೆ ಒಡಂಬಡಿಕೆ ರದ್ದು ಪಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ನಿರ್ದೇಶಿಸಿದರು. ಬಾರ್ ಆಂಡ್ ರೆಸ್ಟೋರೆಂಟ್‌ಗಳಲ್ಲಿ ಎಲ್ಲೆಂದರಲ್ಲಿ ತಂಬಾಕು ಸೇವನೆ,ಧೂಮಪಾನ ನಿಯಂತ್ರಿಸುವಂತೆ ಅಬಕಾರಿ ಡಿಸಿ ಕೆ. ಆಶಾಲತಾ ಅವರಿಗೆ ಸೂಚಿಸಿದರು.

ಜಿಲ್ಲೆಯ ಎಲ್ಲ ಶಾಲಾ, ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ಮಾಡಬೇಕೆಂದು ಡಿಸಿ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 2025ರ ಏಪ್ರಿಲ್‌ನಿಂದ ಜೂನ್‌ವರೆಗೆ ಕೋಟ್ಪಾ ಕಾಯ್ದೆ ಉಲ್ಲಂಘನೆ ಅಡಿ ಒಟ್ಟು 4,801 ಪ್ರಕರಣಗಳನ್ನು ದಾಖಲಿಸಿ ಒಟ್ಟು 3,39,920 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಚಂದ್ರಶೇಖರ ಕಂಬಾಳಿ ಮಠ ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಪ್ರಭಾರ ಎಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಡಿಡಿಪಿಐ ಎಂ.ಆರ್. ಮಂಜುನಾಥ್, ಡಿಎಸ್ ಡಾ.ಎಸ್.ಪಿ. ರವೀಂದ್ರ, ತಂಬಾಕು ನಿಯಂತ್ರಣ ಕೋಶ ವಿಭಾಗೀಯ ಸಂಯೋಜಕ ಮಹಾಂತೇಶ್ ಮತ್ತಿತರರು ಇದ್ದರು.

ತಂಬಾಕು ಮುಕ್ತ ಗ್ರಾಮಗಳ ಘೋಷಣೆ

ಜಿಲ್ಲೆಯಲ್ಲಿ 14 ಹಳ್ಳಿಗಳನ್ನು ತಂಬಾಕು ಮುಕ್ತ ಗ್ರಾಮವೆಂದು ಘೊಷಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ತಾಲೂಕಿನ ಕಲ್ಲೇನಹಳ್ಳಿ, ಮಳಲಿ, ಹಾಯಿತೋಳು ಲಂಬಾಣಿಹಟ್ಟಿ, ಹೊಳಲ್ಕೆರೆಯ ಗರಗ, ಮಹದೇವಪುರ, ಕುಟಿಗೇಹಳ್ಳಿ, ಅಂದನೂರು ಗೊಲ್ಲರಹಟ್ಟಿ, ಹೊಸದುರ್ಗದ ರಂಗಾಪುರ, ಬೇವಿನಹಳ್ಳಿ, ಅರಸಿನತೋಟ, ಸಣ್ಣತಿಪ್ಪೇನಹಳ್ಳಿ, ಚಳ್ಳಕೆರೆಯ ಓಬಯ್ಯನಹಟ್ಟಿ ಗೊಲ್ಲರಹಟ್ಟಿ, ಹಿರಿಯೂರಿನ ಡಿ.ಕೆ. ಹಟ್ಟಿ, ಮೊಳಕಾಲ್ಮೂರಿನ ತುಪ್ಪದಕ್ಕನಹಳ್ಳಿಗಳು ತಂಬಾಕು ಮುಕ್ತವಾಗಲಿವೆ ಎಂದು ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎನ್. ಪ್ರಭುದೇವ ತಿಳಿಸಿದರು.

---