ಜಿಲ್ಲೆ

ಪ್ರತ್ಯೇಕ ಕೋಡ್, ಕಾಲಮ್ ಸೇರಿಸಲು ಒತ್ತಾಯ

ಮಡಿಕೇರಿ: ರಾಷ್ಟ್ರೀಯ ಜನಗಣತಿಯ ಸಂದರ್ಭ ಆದಿಮಸಂಜಾತ ಬುಡಕಟ್ಟು ಜನಾಂಗ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡವ ಯೋಧ ಕುಲಕ್ಕಾಗಿ ಸೋಶಿಯಲ್ ಎಂಜಿನಿಯರಿಂಗ್ ಪ್ರಕ್ರಿಯೆಯ ಭಾಗವಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಸೇರಿಸಬೇಕೆಂದು ಒತ್ತಾಯಿಸಿ ಗೃಹಮಂತ್ರಿಗಳು ಹಾಗೂ ಅವರ ಅಧೀನದಲ್ಲಿ ಬರುವ ರಿಜಿಸ್ಟ್ರಾರ್ ಜನರಲ್ ಮತ್ತು ಸೆನ್ಸಸ್ ಕಮಿಷನರ್ ಆಫ್ ಇಂಡಿಯಾ(ಆರ್‌ಜಿಸಿಸಿಐ) ಇವರಿಗೆ ಸಿಎನ್‌ಸಿ ವತಿಯಿಂದ ಜ್ಞಾಪನಾ ಪತ್ರ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಜನಗಣತಿ ಜೊತೆಗೆ ಜಾತಿವಾರು ಜನಗಣತಿ ನಡೆಸುವ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹವಾಗಿದೆ. ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ನಿಖರವಾದ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಸೋಶಿಯಲ್ ಎಂಜಿನಿಯರಿಂಗ್ ಸರ್ಕಾರವು ಸಮುದಾಯದ ನಿರ್ದಿಷ್ಟ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಉದ್ದೇಶಿತ ನೀತಿಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ. ಪ್ರತ್ಯೇಕ ಕೋಡ್ ಮತ್ತು ಕಾಲಮ್ ಕೊಡವ ಸಮುದಾಯದ ವಿಶಿಷ್ಟ ಗುರುತು ಹಾಗೂ ಅಸ್ತಿತ್ವವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಏಕ-ಜನಾಂಗೀಯ ಸಮುದಾಯವಾಗಿ ಕೊಡವರು ವಿಶಿಷ್ಟ ಸಾಂಸ್ಕೃತಿಕ ಮತ್ತು ಐತಿಹಾಸಿಕ ಕುರುಹುವನ್ನು ಹೊಂದಿದ್ದು, ಅದರ ಗುರುತಿಸುವಿಕೆ ಮತ್ತು ರಕ್ಷಣೆಗೆ ಅರ್ಹವಾಗಿದೆ. ಕೊಡವರ ಯೋಧ ಪರಂಪರೆಯು ಅವರ ಗುರುತಿನ ಅವಿಭಾಜ್ಯ ಅಂಗವಾಗಿದೆ ಮತ್ತು ಜನಗಣತಿಯಲ್ಲಿ ನಿಖರವಾದ ಪ್ರಾತಿನಿಧ್ಯವು ಅವರ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಜನಗಣತಿ ಸಂದರ್ಭ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಸೇರಿಸಬೇಕು. ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು. ಕೊಡವರಿಗೆ ಎಸ್ಟಿ ಟ್ಯಾಗ್ ಘೋಷಿಸಬೇಕು. ಕೊಡವ ಭಾಷೆಯನ್ನು ಸಂವಿಧಾನದ ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಕೊಡವರ ಕೋವಿ ಹಕ್ಕನ್ನು ಶಾಶ್ವತಗೊಳಿಸಬೇಕು. ಸಂಸತ್ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ಪ್ರತ್ಯೇಕ ವಿಶೇಷ ಪ್ರಾತಿನಿಧ್ಯ ನೀಡಬೇಕು. ವಿವಿಧ ಕಾರಣಗಳಿಂದ ಪರರ ಪಾಲಾಗಿರುವ ಕೊಡವ ಪೂರ್ವಜರ ಕೊಡವ ಭೂಮಿಯನ್ನು ಮರಳಿ ಕೊಡವರಿಗೆ ದೊರಕಿಸಿಕೊಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೇ೯ರಂದು ಮಡಿಕೇರಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸುವುದಾಗಿ ಇದೇ ಸಂದರ್ಭ ತಿಳಿಸಿದ್ದಾರೆ.