ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರದಿಂದ ಜಿಲ್ಲಾ ಸಹಕಾರ ಹಾಲು ಒಕ್ಕೂಟವನ್ನು ಇಬ್ಭಾಗ ಮಾಡಿ, ಪ್ರತ್ಯೇಕ ಚಿಕ್ಕಬಳ್ಳಾಪುರ ಒಕ್ಕೂಟ ರಚನೆಗೆ ನಿರ್ದೇಶಕರಲ್ಲಿಯೇ ಭಿನ್ನರಾಗ ಕೇಳಿ ಬಂದಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ನಿರ್ದೇಶಕ ಎನ್.ಸಿ.ವೆಂಕಟೇಶ್ ಅವರ ಪ್ರತ್ಯೇಕತೆ ಅಗತ್ಯವಿಲ್ಲ ಎನ್ನುವ ಮಾತು ಬಹುತೇಕ ನಿರ್ದೇಶಕರು ಸೇರಿ ರೈತರನ್ನು ಕೆರಳಿಸಿದೆ. ಹಾಲು ಉತ್ಪಾದನೆಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಪ್ರತ್ಯೇಕಗೊಳಿಸಲು ವ್ಯಾಪಕವಾಗಿ ಒಲವು ವ್ಯಕ್ತವಾಗಿರುವುದರ ನಡುವೆ ಅಪಸ್ವರವು ಬೇಸರಕ್ಕೆ ಕಾರಣವಾಗಿವೆ.
ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾದ ಬಳಿಕ ಹೊಸ ಆಡಳಿತ ವ್ಯವಸ್ಥೆ ಜಾರಿಗೆ ತಂದ ಮಾದರಿಯಲ್ಲಿ ಅವಿಭಜಿತ ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್ ಮತ್ತು ಜಿಲ್ಲಾ ಸಹಕಾರ ಹಾಲು ಒಕ್ಕೂಟ ಪ್ರತ್ಯೇಕಗೊಳಿಸಬೇಕೆಂಬ ಒತ್ತಾಯ ಮೊದಲಿನಿಂದಲೂ ಕೇಳಿ ಬರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ಉಪ ಚುನಾವಣೆಯ ಮೊದಲು ಪ್ರತ್ಯೇಕ ಚಿಕ್ಕಬಳ್ಳಾಪುರ ಒಕ್ಕೂಟ ವ್ಯವಸ್ಥೆ ರಚನೆ ಭರವಸೆ ನೀಡಿದ್ದರು. ಅದರಂತೆ ಸಹಕಾರ ಸಚಿವರ ನೇತೃತ್ವದಲ್ಲಿ ಸಭೆ ಕೈಗೊಂಡು ಪ್ರಕ್ರಿಯೆಗಳ ಚಾಲನೆಗೆ ಚರ್ಚೆ ಪ್ರಾರಂಭವಾಗುತ್ತಿದ್ದಂತೆ ನಿರ್ದೇಶಕರಲ್ಲಿನ ಭಿನ್ನರಾಗವು ವಿವಾದಕ್ಕೆ ಕಾರಣವಾಗಿದೆ.
ಮೆಗಾ ಡೇರಿ ಸ್ಥಾಪನೆಗೆ ಎನ್‌ಡಿಡಿಬಿ ಸಂಸ್ಥೆಯಿಂದ 85 ಕೋಟಿ ರೂ. ಸಾಲ ಪಡೆದಿರುವ ಹಿನ್ನೆಲೆಯಲ್ಲಿ ಪ್ರತ್ಯೇಕ ಒಕ್ಕೂಟ ರಚನೆಗೆ ಆಕ್ಷೇಪ ವ್ಯಕ್ತವಾಗುತ್ತದೆ. ಇದನ್ನು ಮರು ಪಾವತಿಸಿದ ಬಳಿಕ ಕ್ರಮ ಕೈಗೊಳ್ಳಬಹುದು ಎನ್ನುವುದು ಒಕ್ಕೂಟದ ಮಾಜಿ ಅಧ್ಯಕ್ಷರು, ಕೆಲ ನಿರ್ದೇಶಕರ ವಾದ. ಇದಕ್ಕೆ ಸಾಲ ತೀರಿಸುವುದು, ಹೊಸ ಒಕ್ಕೂಟ ರಚನೆಯಾಗುವುದು ಯಾವಾಗ ಎಂದು ಪ್ರಶ್ನಿಸಿರುವ ನಿರ್ದೇಶಕರು ಅಡೆ-ತಡೆಗಳಿಂದ ತುಂಬಾ ವಿಳಂಬವಾಗುತ್ತದೆ. ಇದಕ್ಕೆ ಸಾಲವನ್ನು ಎರಡು ಒಕ್ಕೂಟಗಳು ಹಂಚಿಕೊಂಡು ಬೇರೆಯಾಗುವುದು ಒಳಿತು ಎಂಬ ಸಲಹೆ ನೀಡಿದ್ದಾರೆ.
ಒಕ್ಕೂಟ ರಚನೆ ಪ್ರಕ್ರಿಯೆ: 2016 ರಿಂದಲೂ ಒಕ್ಕೂಟ ರಚನೆ ಪ್ರಕ್ರಿಯೆಗಳು ಬಿರುಸುಗೊಂಡಿವೆ. ಒಕ್ಕೂಟದ ಸಾಮಾನ್ಯ ಸಭೆಗಳಲ್ಲೂ ಇಬ್ಭಾಗಕ್ಕೆ ಹಲವು ಬಾರಿ ಒತ್ತಡ ಹೇರಲಾಗಿದೆ. ಇನ್ನು 2019ನೇ ಸಾಲಿನ ಜನವರಿಯಲ್ಲಿ ಕೃಷಿ ಸಚಿವರಾಗಿದ್ದ ಎನ್.ಎಚ್.ಶಿವಶಂಕರರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಒಕ್ಕೂಟ ಪ್ರತ್ಯೇಕಗೊಳಿಸುವುದಕ್ಕೆ ಸರ್ವಾನುಮತದ ಒಲವು ವ್ಯಕ್ತವಾಗಿದೆ. ಆದರೆ, ಲೋಕಸಭಾ ಮತ್ತು ವಿಧಾನಸಭಾ, ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಗಳಿಂದ ವಿಳಂಬವಾಯಿತು. ಕಳೆದ ಮಾ.5 ರಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಕೆಎಂಎ್, ಒಕ್ಕೂಟದ ನಿರ್ದೇಶಕರನ್ನೊಳಗೊಳಗೊಂಡ ಸಭೆಯಲ್ಲೂ ಒಮ್ಮತದ ನಿರ್ಧಾರ ಕೈಗೊಂಡಿದ್ದು ಇದನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತರಲಾಗಿದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎನ್ನಲಾಗಿದೆ.
ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ: ಮೈಸೂರು-ಚಾಮರಾಜನಗರ ಹಾಲು ಒಕ್ಕೂಟ ವಿಭಜನೆಯ ಮಾದರಿಯಲ್ಲಿ ಶೀಘ್ರವಾಗಿ ಕೋಲಾರ-ಚಿಕ್ಕಬಳ್ಳಾಪುರ ಒಕ್ಕೂಟ ಪ್ರತ್ಯೇಕಗೊಳಿಸಲು ಐವರು ನಿರ್ದೇಶಕರು, ಮಾಜಿ ಅಧ್ಯಕ್ಷರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲಾ ಸಹಕಾರ ಒಕ್ಕೂಟವು ಪ್ರತ್ಯೇಕಗೊಳಿಸುವುದಕ್ಕೆ ಇದು ಸೂಕ್ತ ಕಾಲವಲ್ಲ. ಸಾಲದ ಹೊರೆ, ಹೊಸ ಮೆಗಾ ಡೇರಿ ನಿರ್ವಹಣೆ ಸೇರಿ ತಾಂತ್ರಿಕ ಸಮಸ್ಯೆಗಳಿವೆ. ಮೊದಲು ಇವು ಬಗೆಹರಿಯಬೇಕು. ಆ ನಂತರ ತೀರ್ಮಾನ ಕೈಗೊಳ್ಳಬೇಕು. -ಎನ್.ಸಿ.ವೆಂಕಟೇಶ್, ಕೋಚಿಮುಲ್ ನಿರ್ದೇಶಕ ಚಿಕ್ಕಬಳ್ಳಾಪುರ ಭಾಗದ ಹಿತ ಕಾಪಾಡಬೇಕಾದ ಸ್ಥಳೀಯ ನಿರ್ದೇಶಕರೇ ಅಪಸ್ವರ ತೆಗೆಯುತ್ತಿರುವುದು ಜನರಿಗೆ ಎಸಗುತ್ತಿರುವ ದ್ರೋಹ. ಬೇಡಿಕೆ ಈಡೇರಿಕೆಗೆ ಒತ್ತಾಯಿಸುವ ಬದಲು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ. ಪ್ರತ್ಯೇಕ ಒಕ್ಕೂಟ ರಚನೆಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. -ಕೆ.ವಿ.ನಾಗರಾಜ್, ಕೋಚಿಮುಲ್ ಮಾಜಿ ಅಧ್ಯಕ್ಷ