ಬಾಗಲಕೋಟೆ ತಾಲೂಕಿನ ಶಿಗಿಕೇರಿ ಕ್ರಾಸ್ ಬಳಿ ಸೋಮವಾರ ಸಂಭವಿಸಿದ ಬೈಕ್ ಹಾಗೂ ಬಸ್ ನಡುವೆ ಅಪಘಾತ. 
ಜಿಲ್ಲೆ

ಪ್ರತ್ಯೇಕ ಅವಘಡ ನಾಲ್ವರು ದುರ್ಮರಣ

ಸಂತೋಷ ದೇಶಪಾಂಡೆ

ಬಾಗಲಕೋಟೆ: ಮೂರು ಪ್ರತ್ಯೇಕ ಅವಘಡ ಘಟನೆಯಲ್ಲಿ ನಾಲ್ಕು ಜನ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಬಾಗಲಕೋಟೆ ತಾಲೂಕಿನ ಶಿಗಿಕೇರಿ ಕ್ರಾಸ್ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಬೈಕ್ ಸವಾರ ಶ್ರೀನಿವಾಸ ಹಂಸನೂರು(32)ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಈಶ್ವರ ಮಾಚಕನೂರು(54) ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮುದ್ದೇಬಿಹಾಳದಿಂದ ಬಾಗಲಕೋಟೆ ಮಾರ್ಗವಾಗಿ ಬರುತ್ತಿದ್ದ ಬಸ್ ಬಾಗಲಕೋಟೆಯಿಂದ ಶಿಗಿಕೇರಿ ಕಡೆ ಬರುತ್ತಿದ್ದ ಬೈಕ್ ಸವಾರರು ನಡುವೆ ಅಪಘಾತ ಸಂಭವಿಸಿದೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನು ಶಿಗಿಕೇರಿ ಕ್ರಾಸ್ ಸಮೀಪದ ರೈಲು ಹಳಿಗೆ ಚಲಿಸುತ್ತಿದ್ದ ರೈಲಿಗೆ ಅಡ್ಡ ಬಿದ್ದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ನಿವಾಸಿ ಯಲ್ಲಪ್ಪ ಅಂಬಿಗೇರ (45) ಮೃತ ದುರ್ದೈವಿ. ಸೊಲ್ಲಾಪುರದಿಂದ ಗದಗ ಮಾರ್ಗವಾಗಿ ಹೊರಟಿದ್ದ ಪ್ಯಾಸೆಂಜರ್ ರೈಲಿಗೆ ಅಡ್ಡಲಾಗಿ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಬಾಗಲಕೋಟೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮೆನ್ ಸಾವು:
ವಿದ್ಯುತ್ ತಂತಿ ತಗಲಿ ವಿದ್ಯುತ್ ಕಂಬದಿಂದ ಬಿದ್ದು ಲೈನ್ ಮೆನ್ ಮೃತಪಟ್ಟಿರುವ ಘಟನೆ ಜಮಖಂಡಿ ತಾಲೂಕಿನ ಜಂಬಗಿ ಬಿ.ಕೆ ಗ್ರಾಮದಲ್ಲಿ ಸೋಮವಾರ ನಡೆದಿದೆ. ಪರಶುರಾಮ ಪಾಯಗೊಂಡ(30) ಮೃತ ದುರ್ದೈವಿ. ಮೂಲತಃ ರಬಕವಿ-ಬನಹಟ್ಟಿ ಗ್ರಾಮದ ಕುಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಸಾವಳಗಿಯಲ್ಲಿ ಹೆಸ್ಕಾಂ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆ ಮಾಹಿತಿ ಇದ್ದರು ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಪರಿಣಾಮ ಜಂಬಗಿ ಬಿ.ಕೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.