ಜಿಲ್ಲೆ

ಪ್ರತ್ಯೇಕ ಅಪಘಾತ ಐವರು ಸಾವು

ವಿಜಯವಾಣಿ ಸುದ್ದಿಜಾಲ ಕಾರವಾರ
ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರೆ, ಇನ್ನಿಬ್ಬರು ಮೇಲಿನಿಂದ ಬಿದ್ದು ಮೃತಪಟ್ಟ ಬಗ್ಗೆ ಭಾನುವಾರ ಜಿಲ್ಲೆಯಲ್ಲಿ ವರದಿಯಾಗಿದೆ
ಕಾರವಾರದ ಸದಾಶಿವಗ ತಾರಿವಾಡ ನಿವಾಸಿ ನಿವೃತ್ತ ಪಿಎಸ್‌ಐ ಸುರೇಶ ಹರಿ ತಾಮಸೆ(61) ಮೃತಪಟ್ಟಿದ್ದಾರೆ. ಜ.18 ರಂದು ನಗರದ ಕೋಡಿಬಾಗದಲ್ಲಿ ಬೈಕ್ ಸ್ಕಿಡ್ ಆಗಿ ಅವರು ಬಿದ್ದು ಗಂಭೀರ ಗಾಯಗೊಂಡಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ಈಗ ಕೆಲ ದಿನಗಳಿಂದ ಕಾರವಾರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಶನಿವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರ ವರದಿ:
ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಪ್ರಭಾತ ನಗರ ರಾಮ ಕಾಂಪ್ಲೆಕ್ಸ್ ಸಮೀಪ ಶನಿವಾರ ಆಟೋ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಪಾದಚಾರಿ ಮಾವಿನಕುರ್ವಾ ಅಂಗಡಿ ಹಿತ್ಲು ಗ್ರಾಮದ ಪುರುಷೋತ್ತಮ ನರಸಿಂಹ ಪೈ(53) ಭಾನುವಾರ ಬೆಳಗಿನಜಾವ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಆಟೋ ಪಲ್ಟಿಯಾಗಿದ್ದು, ಚಾಲಕ ಶಿವಾನಂದ ನಾರಾಯಣ ನಾಯ್ಕ ಹಾಗೂ ಅದರಲ್ಲಿದ್ದ ವಂದೂರಿನ ಮಾದೇವಿ ಗಣಪತಿ ಭಟ್ ಕೂಡ ಗಾಯಗೊಂಡಿದ್ದರು. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಾವರ ಚಂದಾವರದಲ್ಲಿ ಎರಡು ಬೈಕ್‌ಗಳ ನಡುವೆ ಶನಿವಾರ ಸಂಭವಿಸಿದ ಇನ್ನೊಂದು ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮಣಿಪಾಲ ಆಸ್ಪತ್ರೆಯಲ್ಲಿ ಭಾನುವಾರ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಚಂದಾವರ ಒಳಬೇಣದ ಸಿಮಾಂವ ರೋಜಾರ್ ಗೋನ್ಸಾಲ್ವಿಸ್(53) ಮೃತರು. ಘಟನೆಯಲ್ಲಿ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದು, ಬೈಕ್ ಚಾಲಕ ಸಂತೋಷ ಜೂಜೆ ಫರ್ನಾಂಡಿಸ್ ಗಾಯಗೊಂಡಿದ್ದಾರೆ. ಇನ್ನೊಂದು ಬೈಕ್ ಚಾಲಕ ಜನಾರ್ದನ ಸತ್ಯಪ್ಪ ನಾಯ್ಕ ವಿರುದ್ಧ ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಾವಿಗೆ ಬಿದ್ದು ಬಾಲಕ ಸಾವು
ಅಡಕೆ ತೋಟದಲ್ಲಿದ್ದ ನೆಲಬಾವಿಗೆ ಬಿದ್ದು 6 ವರ್ಷದ ಬಾಲಕ ಮೃತಪಟ್ಟ ಘಟನೆ ಹೊನ್ನಾವರದಲ್ಲಿ ಭಾನುವಾರ ನಡೆದಿದೆ. ವಂದೂರು ಪಾವಲಕ್ಕಿ ಸಮೀಪದ ನಾಗಭೂಷಣ ಗಜಾನನ ಹೆಗಡೆ (6) ಮೃತ ಬಾಲಕ. ಬೆಳಗ್ಗೆ 6.30 ಕ್ಕೆ ಎದ್ದು ಮನೆಯ ನಾಯಿ ಹುಡುಕುತ್ತ ತೋಟಕ್ಕೆ ಹೋದ ಬಾಲಕ ಇನ್ನೂ ಬಾರದ್ದನ್ನು ನೋಡಿ ಮನೆಯವರು ಹುಡುಕಿದಾಗ ಪಕ್ಕದ ಮನೆಯ ತೋಟದ ನೆಲಬಾವಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಮಿಕ ಸಾವು:
ಗಿಲಾಯ ಮಾಡುವಾಗ ಆಯತಪ್ಪಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಸಿದ್ದಾಪುರದಲ್ಲಿ ಭಾನುವಾರ ನಡೆದಿದೆ. ಹರಗಿ ಗದ್ದೆಮನೆಯ ಸುರೇಂದ್ರ ಈಶ್ವರ ಗೌಡ(37) ಮೃತ. ಹಾವಿಬೀಳು ಚಿಟ್ಟಟ್ಟೆಯ ತನ್ನ ಪತ್ನಿಯ ತವರು ಮನೆಯಲ್ಲಿ ಮೇಲಂತಸ್ಸಿನ ಗಿಲಾಯ ಮಾಡುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದ್ದಾನೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.