ರೋಣ: ತಾಲೂಕಿನ ಸೂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಸಾಮಾನ್ಯ ಮೀಸಲಾತಿ ಘೊಷಣೆಯಾಗಿದ್ದು, ಕಾಂಗ್ರೆಸ್ನಿಂದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಪುತ್ರ ಅಕ್ಷಯ ಬಿದರೂರ ಹಾಗೂ ಬಿಜೆಪಿಯಿಂದ ಶ್ರೀಶೈಲಪ್ಪ ಸಹೋದರ ರವಿ ಬಿದರೂರ ಸ್ಪರ್ಧಿಸುವ ಸಾಧ್ಯತೆ ಇದೆ. ಹಾಲಿ ಶಾಸಕ ಕಳಕಪ್ಪ ಬಂಡಿ ಹಾಗೂ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ಸೂಡಿ ಜಿಪಂ ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
1994ರಲ್ಲಿ ಜನತಾ ದಳದಿಂದ ರೋಣ ವಿಧಾನಸಭೆ ಕ್ಷೇತ್ರದಿಂದ ಹಾಗೂ 2008ರಲ್ಲಿ ಬಿಜೆಪಿಯಿಂದ ಗದಗ ವಿಧಾನಸಭೆ ಕ್ಷೇತ್ರದಿಂದ ಶ್ರೀಶೈಲಪ್ಪ ಬಿದರೂರ ಆಯ್ಕೆಯಾಗಿದ್ದರು. ಆದರೆ 2018ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಸಿಗಲಿಲ್ಲ. ಹೀಗಾಗಿ, ಬಂಡೆದ್ದು ಕಾಂಗ್ರೆಸ್ ಸೇರಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯ ದಿಕ್ಸೂಚಿಯಾಗಿರುವ ಜಿಪಂ ಚುನಾವಣೆಯಲ್ಲಿ ಸ್ವಗ್ರಾಮ ಸೂಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಪುತ್ರನನ್ನು ಕಣಕ್ಕಿಳಿಸಿ ಶಾಸಕ ಕಳಕಪ್ಪ ಬಂಡಿ ಅವರಿಗೆ ಫೈಟ್ ಕೊಡಲು ಮುಂದಾಗಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಾಸಕ ಕಳಕಪ್ಪ ಬಂಡಿ ಅವರು ಶ್ರೀಶೈಲಪ್ಪ ಸಹೋದರ ರವಿ ಬಿದರೂರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಮಧ್ಯೆ ಶಾಸಕ ಕಳಕಪ್ಪ ಬಂಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಸಂಬಂಧಿ ಎಂದು ಹೇಳಲಾಗುವ ಇಟಗಿ ದೇಸಾಯಿ ಮನೆತನದ, ಬಿಇ ಪದವೀಧರ ದೇವರಾಜ ದೇಸಾಯಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಜತೆಗೆ ಹಿಂದೆ ಈ ಭಾಗದ ಜಿಪಂ ಸದಸ್ಯರಾಗಿ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕುರುಬ ಸಮಾಜದ ಮುಖಂಡ ದಿ. ನಿಂಗಪ್ಪ ಬೇವಿನಮರದ ಪುತ್ರ ಮಲ್ಲಿಕಾರ್ಜುನ ಬೇವಿನಮರದ ಕೂಡ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ.
ಬಂಡಿ-ಬಿದರೂರ ಪೈಪೋಟಿ
ಒಂದು ಕಾಲದ ಗೆಳೆಯರಾಗಿದ್ದ ಕಳಕಪ್ಪ ಬಂಡಿ ಮತ್ತು ಶ್ರೀಶೈಲಪ್ಪ ಬಿದರೂರ ಇದೀಗ ರಾಜಕೀಯ ಬದ್ಧ ವೈರಿಗಳು. ಇಬ್ಬರೂ ದೊಡ್ಡಮೇಟಿಯವರ ಗರಡಿಯಲ್ಲಿ ಪಳಗಿದವರು. ಒಂದೇ ತಾಲೂಕಿನವರಾದ ಇವರ ಮಧ್ಯೆ ಮುಂದೊಂದು ದಿನ ರಾಜಕೀಯ ಭೇದಗಳು ಕಾಣಿಸಿಕೊಳ್ಳುತ್ತವೆ. ಪರಿಣಾಮ ಬಿದರೂರ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ. ಇದೀಗ ಮಗನನ್ನು ಸೂಡಿ ಕ್ಷೇತ್ರದಿಂದ ಕಣಕ್ಕಿಳಿಸಿ ರಾಜಕೀಯ ಭವಿಷ್ಯ ಕಲ್ಪಿಸಲು ಶ್ರೀಶೈಲಪ್ಪ ಮುಂದಾಗಿದ್ದಾರೆ. ಜತೆಗೆ ಶಾಸಕ ಬಂಡಿ ಅವರನ್ನು ರಾಜಕೀಯವಾಗಿ ಹಣಿಯಲು ಯತ್ನಿಸಿದ್ದಾರೆ. ಇದೇ ವೇಳೆ ಬಿದರೂರ ಸಹೋದರ ರವಿ ಅವರನ್ನು ಕಣಕ್ಕಿಳಿಸುವ ಮೂಲಕ ಶ್ರೀಶೈಲಪ್ಪ ಅವರಿಗೆ ಎದಿರೇಟು ಕೊಡಲು ಬಂಡಿ ಮುಂದಾಗಿದ್ದಾರೆ.