ತುಮಕೂರು: ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಹೆಸರಿನಲ್ಲಿ ನಿರ್ಮಿಸಿರುವ ಸುಸಜ್ಜಿತ ಸ್ಮಾರಕ ಭವನವು ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ರಾಜಕೀಯ ಪ್ರತಿಷ್ಠೆಗಾಗಿ ಉದ್ಘಾಟನೆಗೊಂಡ 3 ವರ್ಷಗಳಿಂದ ಬಾಗಿಲು ಮುಚ್ಚಿರುವ ಈ ಭವನವನ್ನು ಸಾರ್ವಜನಿಕರ ಉಪಯೋಗಕ್ಕೆ ತೆರೆಯುವ ಸಣ್ಣ ಪ್ರಯತ್ನವನ್ನೂ ಮಾಡದಿರುವುದು ಜಿಲ್ಲಾಡಳಿತದ ಬೇಜವಾಬ್ದಾರಿಗೆ ಸಾಕ್ಷಿ ಎನಿಸಿದೆ.
2008ರಲ್ಲಿ ಚನ್ನಕೇಶವ ದೇವಸ್ಥಾನಕ್ಕೆ ಹೊಂದಿಕೊಂಡಿರುವ 1.2ಎಕರೆಯಲ್ಲಿ ಸ್ಮಾರಕ ಭವನಕ್ಕೆ ಅಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದರು. ಅಂದು ಸಿಎಂ ಯಡಿಯೂರಪ್ಪ 1 ಕೋಟಿ ರೂ. ಅನುದಾನ ಘೋಷಿಸಿ, ಮುಜರಾಯಿ ಇಲಾಖೆ ಮೂಲಕ ಅನುದಾನ ಬಿಡುಗಡೆಗೆ ಆದೇಶ ಕೂಡ ಮಾಡಿದರು. ಲೋಕೋಪಯೋಗಿ ಇಲಾಖೆ ಮೂಲಕ ಟೆಂಡರ್ ಕರೆದು ಕಾಮಗಾರಿಗೆ ಆ ಸಂದರ್ಭದಲ್ಲಿ ಚಾಲನೆ ನೀಡಲಾಯಿತು.
5.5 ಕೋಟಿ ರೂ., ವೆಚ್ಚ: ಕೈದಾಳ ಅಮರಶಿಲ್ಪಿ ಹುಟ್ಟೂರು. ತುಮಕೂರಿನಿಂದ 9 ಕಿ.ಮೀ., ದೂರದ ಚನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಜಾತ್ರೆ, ಧಾರ್ಮಿಕ ಕಾರ್ಯಗಳಿಗೆ ಪೂರಕವಾಗಿ ಆರ್ಥಿಕ ನೆರವು ಒದಗಿಸುವ ಉದ್ದೇಶದೊಂದಿಗೆ ಸ್ಮಾರಕ ಭವನ ನಿರ್ಮಾಣಕ್ಕೆ 5.5 ಕೋ.ರೂ., ವೆಚ್ಚದ ಯೋಜನೆ ರೂಪಿಸಲಾಯಿತು.
ಆರಂಭದಲ್ಲಿ ಲೋಕೋಪಯೋಗಿ ಇಲಾಖೆ 2 ಕೋಟಿ ರೂ., ವೆಚ್ಚದಲ್ಲಿ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಯಿತು. ನಂತರ ಕುಂಟುತ್ತ ಸಾಗಿದ್ದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು. ಈ ವೇಳೆ ಅಂದು ತುಮಕೂರು ನಗರಾಭಿವೃದ್ಧಿ ಸದಸ್ಯರಾಗಿದ್ದ ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ 2ನೇ ಹಂತದ ಯೋಜನೆಗೆ ಟೂಡಾದಿಂದ 2.50 ಕೋಟಿ ರೂ., ಅನುದಾನ ಪಡೆದು ಕಾಮಗಾರಿ ಪೂರ್ಣಗೊಳಿಸಿದರು.
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಅಲ್ಪಸ್ವಲ್ಪ ಕೆಲಸ ಬಾಕಿ ಇದ್ದ ಭವನವನ್ನು 2018ರ ಜ.22ರಂದು ಉದ್ಘಾಟಿಸಲಾಯಿತು. ಉದ್ಘಾಟನೆಗೊಂಡ ಬಳಿಕ 15ಕ್ಕೂ ಹೆಚ್ಚು ಮದುವೆ ಕಾರ್ಯಕ್ರಮಗಳಿಗೆ ಭವನ ನೀಡಲಾಗಿತ್ತು. ಆದರೆ, ಗ್ರಾಮಾಂತರ ಕ್ಷೇತ್ರದಲ್ಲಿನ ರಾಜಕೀಯ ಪಲ್ಲಟದ ನಂತರ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಭವನದ ಬಾಗಿಲು ಮುಚ್ಚಲಾಗಿದೆ. 3 ವರ್ಷಗಳಿಂದ ಭವನದ ನಿರ್ವಹಣೆಯೂ ಇಲ್ಲ,
ಅದರಿಂದ ನಯಾಪೈಸೆ ಆದಾಯವೂ ಇಲ್ಲವಾಗಿದೆ.
3 ವರ್ಷದಿಂದ ನಿರ್ವಹಣೆ ಇಲ್ಲ !
5.5 ಕೋಟಿ ರೂ., ವೆಚ್ಚದಲ್ಲಿ ನಿರ್ಮಿಸಿರುವ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಭವನ ಕಳೆದ 3 ವರ್ಷಗಳಿಂದ ಬಾಗಿಲು ತೆರೆದಿಲ್ಲ. ಗಿಡ-ಗಂಟಿ, ಪೊದೆ ಬೆಳೆದು ಅಕ್ಷರಷಃ ಮನೆಯೊಡೆಯನಿಲ್ಲದೆ ಅನಾಥವಾಗಿದೆ. ಪ್ರವೇಶ ಮೆಟ್ಟಿಲುಗಳಲ್ಲಿ ಗಿಡಬಳ್ಳಿ ಬೆಳೆದು ಸ್ವಾಗತಕ್ಕೆ ಸಜ್ಜಾಗಿವೆ. ಭವನದ ಸುತ್ತ ದೊಡ್ಡದೊಡ್ಡ ಪೊದೆಗಳು, ಗಿಡಮರಗಳು ಬೆಳೆದುನಿಂತಿದೆ. ಮುಖ್ಯದ್ವಾರಕ್ಕೆ ಬೀಗ ಹಾಕಲಾಗಿದ್ದು, ಸಾರ್ವಜನಿಕರ ಬಳಕೆಗೆ ಅನುವು ಮಾಡದೆ ಜಿಲ್ಲಾಡಳಿತವೂ ನಿರ್ಲಕ್ಷೃವಹಿಸಿದೆ.
ಸುಸಜ್ಜಿತ ಸ್ಮಾರಕ ಭವನ: 250 ಚ.ಅಡಿಯಲ್ಲಿ ನಿರ್ಮಿಸಿರುವ ಸುಸಜ್ಜಿತ ಸ್ಮಾರಕ ಭವನದಲ್ಲಿ ದೊಡ್ಡ ಸಭಾಂಗಣ, ಭೋಜನಾಲಯ, 12 ಕೊಠಡಿಗಳ ಸಹ ಇವೆ. ಸುತ್ತ ಕಾಂಪೌಂಡ್ ನಿರ್ಮಿಸಲಾಗಿದೆ. ವಾಹನಗಳ ಪಾರ್ಕಿಂಗ್‌ಗೆ ಉತ್ತಮ ವ್ಯವಸ್ಥೆ ಕೂಡ ಇದೆ.
ಅಮರಶಿಲ್ಪಿ ಜಕಣಾಚಾರಿ ಹೆಸರು ಅಜರಾಮರವಾಗಲಿ ಎಂಬ ಮಹತ್ವದ ಉದ್ದೇಶವಿಟ್ಟುಕೊಂಡು ಸುಸಜ್ಜಿತ ಸ್ಮಾರಕ ಭವನ ನಿರ್ಮಿಸಲಾಯಿತು. 3 ವರ್ಷಗಳಿಂದ ನಿರ್ವಹಣೆ ಮಾಡಿಲ್ಲ. ಸಾರ್ವಜನಿಕ ಉಪಯೋಗಕ್ಕೂ ಬಳಸಿಲ್ಲ. ಭವನ ನಿರ್ವಹಣೆಗೆ ಡಿಸಿ, ಎಸಿ ನೇತೃತ್ವದಲ್ಲಿ ರಾಜಕೀಯೇತರ ಸಮಿತಿ ರಚಿಸಬೇಕು. ಇನ್ನಾದರೂ ಜಿಲ್ಲಾಡಳಿತ ಕ್ರಮವಹಿಸಬೇಕು. ಬಿ.ಸುರೇಶ್‌ಗೌಡ ಮಾಜಿ ಶಾಸಕ ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಪ್ರವಾಸೋದ್ಯಮ ಇಲಾಖೆಯಿಂದ ಇತ್ತೀಚೆಗೆ 1 ಕೋಟಿ ರೂ., ಅನುದಾನ ಬಿಡುಗಡೆ ಆಗಿದೆ. ಈ ಅನುದಾನದ ಲೆಕ್ಕ ಇಲ್ಲ. ಇದಕ್ಕೂ ಮುನ್ನ ಪಿಡಬ್ಲ್ಯುಡಿ, ಟೂಡಾದಿಂದ ಅನುದಾನ ಬಂದಿದ್ದು ಇದರ ಮಾಹಿತಿಯನ್ನು ಕೇಳಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಸಾರ್ವಜನಿಕರ ಬಳಕೆಗೆ ಕ್ರಮವಹಿಸಲಾಗುವುದು. ಡಿ.ಸಿ.ಗೌರಿಶಂಕರ್ ಗ್ರಾಮಾಂತರ ಶಾಸಕ