ಜಿಲ್ಲೆ

ಪ್ರತಿಷ್ಠೆಗಾಗಿ ಪುರಸಭೆ ನೂತನ ಕಟ್ಟಡದಲ್ಲಿ ಪೂಜೆ

ಕೋಲಾರ: ಸಂವಿಧಾನದ ಬಗ್ಗೆ ಭಾಷಣ ಬಿಗಿಯುವ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸ್ವಪ್ರತಿಷ್ಠೆಗಾಗಿ ಶಿಷ್ಟಾಚಾರ ಉಲ್ಲಂಘನೆ ಮಾಡಿ ಪುರಸಭೆ ಕಟ್ಟಡದಲ್ಲಿ ಪೂಜೆ ನೆರವೇರಿಸಿದ್ದಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಟೀಕಿಸಿದರು.

ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿಯಲ್ಲಿ ಭಾಗವಹಿಸಲು ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ಫೆ.2ರಂದು ಪುರಸಭೆ ನೂತನ ಕಟ್ಟಡ ಉದ್ಘಾಟನೆಗೆ ಆಹ್ವಾನಿಸಿದ್ದು ನಿಜ. ಆದರೆ ಆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ಕುಳಿತು ಸೂಕ್ತವಾದ ದಿನ ಕಾರ್ಯಕ್ರಮ ಹಮ್ಮಿಕೊಳ್ಳೋಣ ಎಂದು ಪೌರಾಡಳಿತ ಸಚಿವರು ಹಾಗೂ ಸಂಸದ ಎಸ್.ಮುನಿಸ್ವಾಮಿ ನಮಗೆ ತಿಳಿಸಿದ್ದರಿಂದ ಪುರಸಭೆ ನೂತನ ಕಟ್ಟಡ ಉದ್ಘಾಟನೆ ಮುಂದೂಡಲು ಮನವಿ ಮಾಡಿದರೂ ಸರ್ಕಾರದ ಭಾಗವಾಗಿರುವ ಶಾಸಕರು, ಸಂಸದರನ್ನು ದೂರವಿಟ್ಟು ಕಾರ್ಯಕ್ರಮ ನಡೆಸಲು ಮುಂದಾಗಿದ್ದರಿಂದ ಗೊಂದಲ ಸೃಷ್ಟಿಗೆ ಕಾರಣವಾಯಿತು ಎಂದರು.

ಶಾಸಕರು ಪುರಸಭೆ ಕಚೇರಿ ಪ್ರವೇಶಿಸಲು ಹೈಡ್ರಾಮಾ ಮಾಡುವ ಅಗತ್ಯವಿರಲಿಲ್ಲ, ಪ್ರತಿಷ್ಠೆ ಬದಿಗಿಟ್ಟು ಪೌರಾಡಳಿತ ಸಚಿವರು ಹಾಗೂ ನನ್ನೊಂದಿಗೆ ಚರ್ಚಿಸಿದ್ದರೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಬಹುದಿತ್ತು. ಪ್ರಸ್ತುತ ಶಾಸಕರು ನೆರವೇರಿಸಿರುವ ಪೂಜಾ ಕಾರ್ಯಕ್ರಮ ಅಧಿಕೃತವಲ್ಲ, ಶೀಘ್ರ ಉದ್ಘಾಟನೆಗೆ ದಿನಾಂಕ ನಿಗದಿ ಪಡಿಸಲಾಗುವುದು, ಎಸ್.ಎನ್.ನಾರಾಯಣಸ್ವಾಮಿ ಮತ್ತು ಸಂಸದ ಎಸ್.ಮುನಿಸ್ವಾಮಿ ಅವರನ್ನು ವಿಶ್ವಾಸಕ್ಕೆ ಪಡೆದು ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು. ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕ ವೈ.ಸಂಪಂಗಿ ಇತರರು ಇದ್ದರು.

ವಿಷ ಬೀಜ ಬಿತ್ತುವ ಹುನ್ನಾರ: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಷಡ್ಯಂತ್ರವಾಗಿದೆ, ಸ್ವಾರ್ಥಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಳ್ಳುವುದು ಸರಿಯಲ್ಲ, ಶಾಲೆಗಳಲ್ಲಿ ಸಮಾನತೆ ಕಾಣಲು ಹಿಜಾಬ್ ಮತ್ತು ಕೇಸರಿ ಬಿಟ್ಟು ಸಮವಸ್ತ್ರಕ್ಕೆ ಗೌರವ ನೀಡುವುದು ಸೂಕ್ತ. ಹಿಜಾಬ್ ಧರಿಸುವ ಬಗ್ಗೆ ಹೈಕೋರ್ಟ್ ನೀಡುವ ತೀರ್ಪನ್ನು ಪ್ರತಿಯೊಬ್ಬರೂ ಗೌರವಿಸಬೇಕು. ವಿದ್ಯಾರ್ಥಿಗಳನ್ನು ಕೋಮು ಹಾಗೂ ರಾಜಕೀಯ ದಾಳವಾಗಿ ಬಳಕೆ ಮಾಡಿಕೊಳ್ಳಬಾರದು ಎಂದು ಮುನಿರತ್ನ ಹೇಳಿದರು.

ಪಾಲಕರು ಮಕ್ಕಳಿಗೆ ಬುದ್ಧಿ ಹೇಳಬೇಕು, ಪ್ರಚೋದನೆೆ ನೀಡುವವರ ಬಗ್ಗೆ ಜಾಗೃತಿ ಮೂಡಿಸಬೇಕು, ಶಾಲಾ- ಕಾಲೇಜುಗಳಲ್ಲಿ ಸಮಾನತೆ, ಸಾಮರಸ್ಯಕ್ಕೆ ಒಗ್ಗೂಡಿ ಕೆಲಸ ಮಾಡಬೇಕು. ರಾಜ್ಯದಲ್ಲಿನ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ದೇಶಕ್ಕೆ ಮಾರಕವಾಗುವುದರಿಂದ ವಿಚಾರವಂತರು, ಬುದ್ಧಿಜೀವಿಗಳು ಗಮನಹರಿಸಿ ಮುಂದೆ ಈ ರೀತಿ ನಡೆಯದಂತೆ ಮಾರ್ಗದರ್ಶನ ನೀಡಬೇಕು. ಮುನಿರತ್ನ, ಸಚಿವ