ಜಿಲ್ಲೆ

ಪ್ರತಿಯೊಬ್ಬರೂ ಸರ್ಕಾರದ ಆದೇಶ ಪಾಲಿಸಿ

ಸಿದ್ದಾಪುರ: ಪ್ರತಿಯೊಬ್ಬ ವರ್ತಕರು ಹಾಗೂ ಸಾರ್ವಜನಿಕರು ಸರ್ಕಾರದ ಆದೇಶಗಳನ್ನು ಪಾಲಿಸಬೇಕು. ಅನಗತ್ಯವಾಗಿ ಓಡಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಹೇಳಿದರು.

ಸ್ಥಳೀಯ ಪಪಂ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿದ ಅವರು, ಲಾಕ್​ಡೌನ್ ಸಡಿಲಿಕೆ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮದ ಕುರಿತು ಮಾಹಿತಿ ನೀಡಿದರು.

ಪಟ್ಟಣದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಹೋಟೆಲ್​ನವರು ಉಪಾಹಾರವನ್ನು ಪಾರ್ಸಲ್ ನೀಡಬೇಕು. ಮುಖ್ಯವಾಗಿ ಕ್ಷೌರಿಕ ಅಂಗಡಿಯವರು ಹೆಚ್ಚು ಜಾಗೃತಿ ವಹಿಸಬೇಕು. ಎಲ್ಲ ಅಂಗಡಿ ಮಾಲೀಕರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ ಧರಿಸಿಕೊಳ್ಳಬೇಕು, ನಾಗರಿಕರು ಕೂಡ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ದಂಡ ಹಾಕಲಾಗುವುದು ಎಂದರು.

ಚೆಕ್​ಪೋಸ್ಟ್​ನಲ್ಲಿ ಸೂಕ್ತ ಕ್ರಮ: ತಾಲೂಕಿನ 4 ಚೆಕ್ ಪೋಸ್ಟ್​ಗಳಲ್ಲಿ ಹೊರಗಿನಿಂದ ಬರುವವರ ಪೂರ್ಣ ವಿವರ ಪಡೆಯುವುದರ ಜತೆಗೆ ಅವರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜ್ವರದ ಲಕ್ಷಣ ಕಂಡುಬಂದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗವುದು ಎಂದು ತಹಸೀಲ್ದಾರ್ ಮಂಜುಳಾ ಭಜಂತ್ರಿ ಹೇಳಿದರು.

ಸಿಪಿಐ ಪ್ರಕಾಶ ಮಾತನಾಡಿ, ಜನತೆ ಲಾಕ್​ಡೌನ್ ಸಡಿಲಿಕೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಅವಶ್ಯವಿದ್ದರೆ ಮಾತ್ರ ಪಟ್ಟಣಕ್ಕೆ ಬರಬೇಕು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಹಾಗೂ ಸರ್ಕಾರದ ಸೂಚನೆಯನ್ನು ಸರಿಯಾಗಿ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಹೆಚ್ಚು ಸಮಯ ನೀಡಿ: ಪಟ್ಟಣದಲ್ಲಿ ಬೆಳಗ್ಗೆ 7ರಿಂದ ಮಧ್ಯಾಹ್ನ 3ರವರೆಗೆ ಅಂಗಡಿ ತೆರೆಯಲು ಅವಕಾಶ ನೀಡಬೇಕು ಎಂದು ವರ್ತಕರು ಕೇಳಿಕೊಂಡರು. ಆಗ ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ ಪ್ರತಿಕ್ರಿಯಿಸಿ, ಅದು ಸಾಧ್ಯವಿಲ್ಲ. ಸರ್ಕಾರ ನೀಡಿರುವ ಸಮಯ ಪಾಲಿಸಬೇಕು ಎಂದರು. ಸಭೆಯಲ್ಲಿ ಐವತ್ತಕ್ಕೂ ಹೆಚ್ಚು ವರ್ತಕರಿದ್ದರು. ಪಪಂ ಅಧಿಕಾರಿ ಶ್ರೀರಾಮ ನಾಯ್ಕ, ಲಕ್ಷ್ಮೀ ನಾಯ್ಕ ಉಪಸ್ಥಿತರಿದ್ದರು.