ಜಿಲ್ಲೆ

ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಮುಂದಾಗಲಿ

ಶಿರಹಟ್ಟಿ: ತಾಪಮಾನ ವಿಪರೀತ ಹೆಚ್ಚಾಗುತ್ತಿದ್ದು, ಸಸಿಗಳನ್ನು ಬೆಳೆಸಿ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸವಿತಾ ತಾಬ್ರೆ ಹೇಳಿದರು.

ಪಟ್ಟಣದ ಎ.ಎ. ಪಠಾಣ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧಗ್ರಾ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆ ಮತ್ತು ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನು ಭೂಮಿ ಮೇಲಿರುವ ಸಕಲ ಜೀವಸಂಕುಲದೊಂದಿಗೆ ಬದುಕಬೇಕು. ಹೀಗಾಗಿ ಹೆಚ್ಚೆಚ್ಚು ಗಿಡ ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿ ನಾಯಕ ಮಾತನಾಡಿ, ಪ್ರಕೃತಿ ನಮಗೆ ಎಲ್ಲವನ್ನೂ ನೀಡಿದೆ. ಅದನ್ನು ಸಂರಕ್ಷಿಸಿಕೊಂಡು ಹೋಗುವುದು ಮಾನವ ಧರ್ಮ. ಪರಿಸರವು ಮಾನವನ ಏಳಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಿದೆ. ಸಮಾಜದಲ್ಲಿ ಬದುಕುವ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ತಮ್ಮ ಮನೆಗಳ ಮುಂದೆ ಸಸಿಯನ್ನು ನೆಟ್ಟು ಪೋಷಿಸಬೇಕು. ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ಧಿ ಮತ್ತು ಕೈಗಾರಿಕೀಕರಣದಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪರಿಸರ ಪ್ರಜ್ಞೆ ಬೆಳೆಯಬೇಕಾಗಿದೆ. ಅರಣ್ಯ ನಾಶದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕಾದ ಅಗತ್ಯವಿದೆ ಎಂದರು.

ಶಾಲೆಯ ಮುಖ್ಯೋಪಾಧ್ಯಾಯ ಎಂ.ಎ. ಮಕಾನದಾರ, ಯೋಜನಾಧಿಕಾರಿ ಪುನಿತ್ ಓಲೇಕಾರ, ಕೆ.ಎ. ಬಳಿಗೇರ, ಮುನ್ನಾ ಪಟಾಣ, ಎಂ.ಕೆ. ಲಮಾಣಿ, ಮಹಾಂತೇಶ ದಶಮನಿ, ಅಜ್ಜುಗೌಡ್ರ ಪಾಟೀಲ, ಪ್ರಕಾಶ ಬೋರಶೆಟ್ಟರ, ಮರಿಯಪ್ಪ ಅಣ್ಣಿಗೇರಿ, ಇತರರಿದ್ದರು.