ಜಿಲ್ಲೆ

ಪ್ರತಿಯೊಬ್ಬರೂ ನ್ಯಾಯಕ್ಕೆ ತಲೆಬಾಗಿ

ಬೀದರ್: ಪ್ರತಿಯೊಬ್ಬರೂ ನ್ಯಾಯಕ್ಕೆ ತಲೆಬಾಗಿ ನಡೆಯಬೇಕು ಹಾಗೂ ಅದಕ್ಕೆ ಗೌರವ ಕೊಡಬೇಕು. ನಿತ್ಯದ ಚಟುವಟಿಕೆಗಳಲ್ಲಿ ನ್ಯಾಯವನ್ನು ಉಳಿಸಿ-ಬೆಳೆಸಬೇಕು ಎಂದು ಗುರುನಾನಕ್ ಶಾಲೆ ಅಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು.

ಗುರುನಗರ ಕಾಲನಿಯಲ್ಲಿರುವ ಗುರುನಾನಕ್ ದೇವ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ ವಿಶ್ವ ನ್ಯಾಯ ದಿನಾಚರಣೆಯಲ್ಲಿ ಮಾತನಾಡಿ, ಜನರಿಗೆ ನ್ಯಾಯದ ಬಗ್ಗೆ ತಿಳಿವಳಿಕೆ ಕೊಡಬೇಕು. ಸಮಾಜದಲ್ಲಿ ಅನ್ಯಾಯ ಕಂಡಾಗ ಅದನ್ನು ಹೋಗಲಾಡಿಸಲು ಎಲ್ಲರೂ ಬದ್ಧರಾಗಬೇಕು. ಎಲ್ಲರಿಗೆ ನ್ಯಾಯವೇ ದೇವರು ಎಂದು ತಿಳಿಸಿದರು.

ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಮಾಜ ಸುಧಾರಕ ಹೆಣ್ಣು ಮಕ್ಕಳ ಜೀವನ ಚರಿತ್ರೆ ತುಣುಕುಗಳನ್ನು ಪ್ರದರ್ಶಿಸಿದರು. ಗೃಹಿಣಿಯಾಗಿದ್ದುಕೊಂಡು ಮೂಢನಂಬಿಕೆ ತಮ್ಮ ಸುತ್ತ ಆವರಿಸಿದರೂ ಅದನ್ನು ಮೀರಿ ಬೆಳೆದ ಸುಂದರಿ ದೇವಿ ಅವರ ಬಗ್ಗೆ, ಒಳ್ಳೆಯ ಕನಸಿನೊಂದಿಗೆ ಸಾಗಿ ಕಷ್ಟಗಳನ್ನು ಎದುರಿಸುತ್ತ ಬೆಳೆದು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶಾಲೆಯನ್ನು ತೆರೆದ ಬಗ್ಗೆ ಹಾಗೂ ಬಡತನ ಗೆರೆಯನ್ನು ದಾಟಿ ಸಾಧನೆಗೈದ ಮಹಿಳೆಯರ ಬಗ್ಗೆ ನಾಟಕದ ಮುಖಾಂತರ ಎಲ್ಲರ ಗಮನ ಸೆಳೆದರು.

ಪ್ರಾಚಾರ್ಯೆ ಸವಿತಾ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.