ಜಿಲ್ಲೆ

ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಿ

ಪಾಂಡವಪುರ: ಮೋಟಾರ್ ವಾಹನಗಳ ಕಾಯ್ದೆ ಉಲ್ಲಂಘಿಸಿ ವಾಹನ ಚಲಾಯಿಸುವುದು ದಂಡ ಮತ್ತು ಶಿಕ್ಷಾರ್ಹ ಅಪರಾಧ. ಹೀಗಾಗಿ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಸ್.ಮಹೇಶ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಡಿದು ವಾಹನ ಚಾಲನೆ, ಡಿಎಲ್ ಇಲ್ಲದಿರುವುದು, ತ್ರಿಬಲ್ ರೈಡಿಂಗ್, ಇನ್ಶೂರೆನ್ಸ್ ಮಾಡಿಸದೆ ಇರುವುದು ಅಪರಾಧವಾಗಿದೆ. ಆದರೆ ಇತ್ತೀಚಿನ ಯುವಕರು ಕಾನೂನು ಪಾಲನೆ ಮಾಡದೆ ವಾಹನ ಚಲಾಯಿಸುತ್ತಾರೆ. ಇದರಿಂದ ದೊಡ್ಡ ಮೊತ್ತವನ್ನು ದಂಡವಾಗಿ ತೆರಬೇಕಾಗುತ್ತದೆ. ಒಂದು ವೇಳೆ ದಂಡ ಪಾವತಿಸದಿದ್ದರೆ ಒಂದು ವರ್ಷದವರೆಗೆ ಜೈಲು ಅನುಭವಿಸಬೇಕು. ಹೀಗಾಗಿ ಪ್ರತಿಯೊಬ್ಬರೂ ಕಾನೂನು ಪಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ತಂದೆ, ತಾಯಿಗಳು ಸಾಕಷ್ಟು ಕಷ್ಟ ಪಟ್ಟು ಮಕ್ಕಳನ್ನು ಬೆಳೆಸುತ್ತಾರೆ. ಸಾಲ ಮಾಡಿ ಒಳ್ಳೆಯ ಬಟ್ಟೆ, ಬೈಕ್ ತೆಗೆದುಕೊಡುತ್ತಾರೆ. ಆದರೆ ನಾವು ವಾಹನಗಳನ್ನು ಅಡ್ಡಾದಿಡ್ಡಿ ಚಲಾಯಿಸಿ ಪ್ರಾಣ ತೆತ್ತರೆ ಪಾಲಕರ ಕತೆ ಏನಾಗಬೇಕು. ವಾಹನದಲ್ಲಿ ನೀಡಿರುವ ಇಂಡಿಕೇಟರ್‌ಗಳನ್ನು ಬಳಸಿದರೆ ಶೇ20ರಷ್ಟು ಅಪಘಾತಗಳು ಕಡಿಮೆಯಾಗುತ್ತದೆ. ಅದನ್ನು ನಾವು ಬಳಸುವುದೇ ಇಲ್ಲ. ಇನ್ಶೂರೆನ್ಸ್ ಇಲ್ಲವಾದರೆ ಲಕ್ಷಾಂತರ ರೂ.ದಂಡ ಕಟ್ಟಬೇಕಾಗುತ್ತದೆ. ಕಾನೂನು ರೀತಿಯಲ್ಲಿ ಪ್ರತಿಯೊಬ್ಬರೂ ನಡೆದುಕೊಂಡರೆ ಕಾನೂನು ರಕ್ಷಣೆ ಕೊಡುತ್ತದೆ. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳಿಗೆ ಕಾನೂನು ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಮಂಜುನಾಥ್, ಸಿವಿಲ್ ನ್ಯಾಯಾಧೀಶ ಕೆ.ಎನ್.ಕಿಶೋರ್‌ಕುಮಾರ್, ಜೆಎಂಎಫ್‌ಸಿ ನ್ಯಾಯಾಧೀಶೆ ಎಂ.ಪದ್ಮಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮಧುಸೂದನ್, ನ್ಯಾಯಾಲಯ ಸಿಬ್ಬಂದಿ ಮಂಚಯ್ಯ, ಮನು ಇತರರು ಇದ್ದರು.
ಪಾಂಡವಪುರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಎಸ್.ಮಹೇಶ್ ಉದ್ಘಾಟಿಸಿದರು.