ಚಿಕ್ಕಬಳ್ಳಾಪುರ : ಕರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ಈ ಮೂಲಕ ಸೋಂಕಿನ ನಿಯಂತ್ರಣ ಸಾಧ್ಯ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.
ನಗರದ ಹಳೇ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಮರ್ಥನಂ ಟ್ರಸ್ಟ್ ಸಿಎಸ್‌ಆರ್ ಯೋಜನೆಯಡಿ ಆರೋಗ್ಯ ಇಲಾಖೆಗೆ ನೀಡಿರುವ ಐಸಿಯು ಹಾಸಿಗೆಗಳನ್ನು ಬುಧವಾರ ಸ್ವೀಕರಿಸಿ ಮಾತನಾಡಿ, 45 ವರ್ಷ ಮೇಲ್ಪಟ್ಟವರು ಸ್ವಯಂ ಪ್ರೇರಿತರಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಹಾಗೆಯೇ ಮಾಸ್ಕ್ ಧರಿಸುವಿಕೆ, ಅಂತರ ಕಾಪಾಡಿಕೊಳ್ಳುವಿಕೆ ಸೇರಿ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದರು.
ಅಂಗವಿಕಲರು ಸ್ವಾವಲಂಬಿ ಜೀವನ ನಡೆಸುವಂತಾಗಲು ಶ್ರಮಿಸುತ್ತಿರುವ ಸಮರ್ಥನಂ ಸಂಸ್ಥೆಯ ಸಾಮಾಜಿಕ ಕಳಕಳಿ ಅಭಿನಂದನಾರ್ಹ. 5 ತಿಂಗಳ ಹಿಂದೆ ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್ ಹಾಗೂ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿದ್ದ ಸಂಸ್ಥೆ ಈಗ ಜಿಲ್ಲೆಗೆ 25 ಐಸಿಯು ಹಾಸಿಗೆಗಳನ್ನು ನೀಡುತ್ತಿದೆ ಎಂದು ಲತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಂಕಿನ ಎರಡನೇ ಅಲೆಯ ತೀವ್ರತೆ ನಡುವೆಯೂ ಜಿಲ್ಲೆ ಸುರಕ್ಷಿತ ವಲಯದಲ್ಲಿದೆ, ಹಾಗೆಂದು ನಿರ್ಲಕ್ಷ್ಯ ವಹಿಸಬಾರದು. ಸೋಂಕಿತರಲ್ಲಿ ಚೇತರಿಕೆ ಪ್ರಮಾಣ ಶೇ.98ರಷ್ಟಿರುವುದು ವಿಶ್ವಾಸ ಮೂಡಿಸಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಇಂದಿರಾ ಆರ್ ಕಬಾಡೆ ತಿಳಿಸಿದರು.
ದೇಶದ ಗಡಿಯಲ್ಲಿ ಯೋಧರು ಭಯೋತ್ಪಾದಕರನ್ನು ಹೊಡೆದುರುಳಿಸುವ ರೀತಿಯಲ್ಲಿ ದೇಶದ ಒಳಗಿನ ಮಾರಕ ಕರೊನಾ ಸೋಂಕನ್ನು ತೊಲಗಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಸಮರ್ಥನಂ ಸಂಸ್ಥೆಯ ಸಿ.ಎಸ್.ಆರ್. ಮುಖ್ಯಸ್ಥ ಸುಧೀಂದ್ರ ಮನವಿ ಮಾಡಿದರು.
ಸಂಸ್ಥೆಯ ಆಪರೇಷನ್ ಘಟಕದ ಮುಖ್ಯಸ್ಥ ದೇಶಪಾಂಡೆ, ಸಿಎಸ್‌ಆರ್ ಸಂಸ್ಥೆಯ ಮುಖ್ಯಸ್ಥ ಸೃಜನ್‌ರಾವ್ ಇದ್ದರು.
6ಸಾವಿರ ಅಂಗವಿಕಲರಿಗೆ ಯುಡಿಐ ಕಾರ್ಡ್ಅಂಗವಿಕಲರು ಕೇವಲ ಅನುಕಂಪ ಗಿಟ್ಟಿಸಿಕೊಂಡು ಸರ್ಕಾರದ ಯೋಜನೆಗಳನ್ನು, ಸೌಕರ್ಯಗಳನ್ನು ಪಡೆಯುವುದಷೇ ಅಲ್ಲ, ಸಾಮರ್ಥ್ಯಕ್ಕೆ ಸಾಧ್ಯವಾಗುವಂತಹ ಕೆಲಸಗಳನ್ನು ನಿರ್ವಹಿಸಿ, ಸರ್ಕಾರಕ್ಕೆ ತೆರಿಗೆ ಪಾವತಿಸುವ ಮಟ್ಟಕ್ಕೆ ಬೆಳೆಸುವುದೇ ಸಂಸ್ಥೆಯ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಜಿಲ್ಲೆಯ 6ಸಾವಿರ ಅಂಗವಿಕಲರಿಗೆ ಯುಡಿಐ ಕಾರ್ಡ್‌ನ್ನು ಮಾಡಿಸಿಕೊಡಲು ಯೋಜನೆ ರೂಪಿಸಲಾಗಿದೆ ಎಂದು ಸಮರ್ಥನಂ ಸಂಸ್ಥೆಯ ಮುಖ್ಯಸ್ಥ ಮಾಲ್ತೇಶ್ ತಿಳಿಸಿದರು.