ಜಿಲ್ಲೆ

ಪ್ರತಿಯೊಬ್ಬರು ಮಾನಸಿಕ ಆರೋಗ್ಯದತ್ತ ಕಾಳಜಿ ವಹಿಸಿ

ಚಾಮರಾಜನಗರ: ದಿನ ನಿತ್ಯದ ದೈನಂದಿನ ಕೆಲಸಗಳನ್ನು ಸುಸೂತ್ರವಾಗಿ ನಿರ್ವಹಿಸಲು ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವೂ ಸಹ ಮುಖ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.

ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದೊಂದಿಗೆ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಮನುಷ್ಯನು ಆರೋಗ್ಯವಾಗಿ ದಿನನಿತ್ಯದ ದೈನಂದಿನ ಕೆಲಸಗಳನ್ನು ಮಾಡಲು ಮಾನಸಿಕ ಆರೋಗ್ಯವೂ ಸಹ ಉತ್ತಮವಾಗಿರಬೇಕು. ಮಾನಸಿಕವಾಗಿ ಸದೃಢವಾಗಿಲ್ಲದಿದ್ದಲ್ಲಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮನಸ್ಸು ಸ್ಥೀಮಿತವಾಗಿ ಇರಬೇಕು. ಮಾನಸಿಕ ಆರೋಗ್ಯಕ್ಕಾಗಿ ಮಿತವಾದ ಪೌಷ್ಠಿಕ ಆಹಾರ ಸೇವನೆ, ದಿನನಿತ್ಯ 8 ಗಂಟೆಗಳ ಕಾಲ ನಿದ್ರೆ ಅಗತ್ಯವಿದೆ. ಎಂತಹ ಒತ್ತಡ ಬಂದರೂ ಮಾನಸಿಕ ಸ್ಥಿರತೆಯನ್ನು ಕಳೆದುಕೊಳ್ಳಬಾರದು. ಕಲೆ, ಕ್ರೀಡೆ ಮನರಂಜನೆ, ಯೋಗ, ವ್ಯಾಯಮದಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಸಮಸ್ಯೆಗಳು ಎದುರಾದಾಗ ಆಪ್ತರೊಂದಿಗೆ ಸಮಾಲೋಚಿಸಿ ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಎಸ್. ಚಿದಂಬರ ಮಾತನಾಡಿ, ಭಾವನೆಗಳನ್ನು ನಮ್ಮ ಸ್ಥೀಮಿತದಲ್ಲಿ ಇಟ್ಟುಕೊಳ್ಳಬೇಕು. ಉತ್ತಮವಾದ ಆಹಾರ ಸೇವನೆ, ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮಾನಸಿಕ ಖಿನ್ನತೆಗೆ ಒಳಗಾದಾಗ ಕುಟುಂಬದವರೊಂದಿಗೆ ಚರ್ಚಿಸಿ ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು. ಮಾನಸಿಕ ಆರೋಗ್ಯಕ್ಕಾಗಿ ಮನೋಚೈತನ್ಯ ಕ್ಲಿನಿಕ್ ಸಂಪರ್ಕಿಸಿ ಔಷಧಿ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದರು.

ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಜಾಥಾ ಪ್ರಮುಖ ರಸ್ತೆಗಳಲ್ಲಿ ಸಾಗಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ತಜ್ಞರಾದ ಡಾ. ಕೆ.ವಿ ಮೇರಿ ಅಂಜಲಾ, ಸಿಮ್ಸ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ಜೆ.ಎನ್.ರಘು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ, ಆರೋಗ್ಯ ನಿರೀಕ್ಷಣಾಧಿಕಾರಿ ಗಿರಿಜಾ ಶಂಕರ್, ಸರ್ಕಾರಿ ನರ್ಸಿಂಗ್ ಶಾಲೆಯ ಪ್ರಾಂಶುಪಾಲೆ ಕಮಲಾ, ಬೋಧಕರಾದ ಸೌಮ್ಯಾ, ಗಗನ್, ಸುಪ್ರೀತಾ ಇತರರು ಹಾಜರಿದ್ದರು.