ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಪರಿಸರ ಮಾಲಿನ್ಯ ಉಂಟಾಗುತ್ತಿದ್ದು, ಪ್ರತಿಯೊಬ್ಬರು ಗಿಡನೆಟ್ಟು ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕಿದೆ ಎಂದು ಕುದೇರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಶೀಲಾ ನಾಗರಾಜ್ ಹೇಳಿದರು.
ತಾಲೂಕಿನ ಕುದೇರು ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ತೆಂಗಿನ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಕುದೇರು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಈಗಾಗಲೇ ಪಂಚಾಯಿತಿ ಆವರಣದಲ್ಲಿ ನಡು ತೋಪು ಬೆಳೆಸಿದ್ದೇವೆ. ಈ ದಿನ ಗ್ರಾಮ ಪಂಚಾಯಿತಿಗೆ ಸೇರಿದ ಗ್ರಂಥಾಲಯದ ಆವರಣ, ಸ್ವಚ್ಛತ ಕೇಂದ್ರದ ಆವರಣ ಹಾಗೂ ರಾಜೀವ್ ಗಾಂಧಿ ಭವನದ ಮುಂಭಾಗ 100 ತೆಂಗಿನ ಗಿಡಗಳನ್ನು ನೆಟ್ಟು ಬೆಳೆಸಲು ಪಣ ತೊಟ್ಟಿದ್ದೇವೆ ಎಂದು ತಿಳಿಸಿದರು.
ಆಧುನಿಕ ಹೊಡೆತಕ್ಕೆ ಸಿಲುಕಿ ಪ್ರತಿಯೊಂದು ಆಹಾರ ಪದಾರ್ಥಗಳು ಕೂಡ ರಾಸಾಯನಿಕಯುಕ್ತವಾಗಿದೆ. ನಾವು ನಮ್ಮ ಸುತ್ತಲಿನ ಪರಿಸರವನ್ನು ಸಂರಕ್ಷಣೆ ಮಾಡದೇ, ವಿವಿಧ ಬಗೆಯ ಮಾಲಿನ್ಯಗಳನ್ನು ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡನೆಟ್ಟು ಪೋಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ರೈತರು ಸಹ ತಮ್ಮ ಜಮೀನುಗಳಲ್ಲಿ ಮರ-ಗಿಡಗಳನ್ನು ಬೆಳೆಸಲು ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋವಿಂದಯ್ಯ, ಕಾರ್ಯದರ್ಶಿ ರೂಪ, ಪರಿಸರ ಪ್ರೇಮಿ ದೇಮಹಳ್ಳಿ ಶಿವಕುಮಾರ್, ಗ್ರಾಮದ ಮುಖಂಡ ಬಸವರಾಜು, ನಾಗೇಂದ್ರಸ್ವಾಮಿ, ಪ್ರಕಾಶ್, ಸಿದ್ದರಾಜು, ರಾಮಸ್ವಾಮಿ ಇತರರು ಹಾಜರಿದ್ದರು.