ಹಾಸನ: ಪ್ರತಿಯೊಬ್ಬ ಮನುಷ್ಯನ ಜೀವನ ಜೇನಿನಂತಿರಬೇಕು. ಏಕೆಂದರೆ ಜೇನು ಯಾವಾಗಲೂ ಸಿಹಿಯನ್ನೇ ನೀಡುತ್ತದೆ ಎಂದು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಡಾ. ವಿಜಯ್‌ಅಂಗಡಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು- ಸ್ವಾಯತ್ತ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ, 2024-25 ನೇ ಸಾಲಿನ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಪ್ಪ-ಅಮ್ಮಂದಿರು ನಿಮ್ಮ ಮೇಲೆ ಅಪಾರವಾದ ನಂಬಿಕೆಯಿಟ್ಟಿದ್ದಾರೆ ಅವರ ನಂಬಿಕೆಗೆ ಚ್ಯುತಿ ಬರುವಂತೆ ನಡೆದುಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪರಿಶ್ರಮದಿಂದ ಎಲ್ಲವೂ ಸಾಧ್ಯ. ಕೆಲವೊಮ್ಮೆ ಬೇರೆಯವರ ಕೆಡುಕನ್ನು ಹುಡುಕುವ ನಮಗೆ ನಾವೆಷ್ಟು ಒಳ್ಳೆಯವರು ಎಂದು ಪ್ರಶ್ನಿಸಿಕೊಳ್ಳಬೇಕು. ಹಾಗೆಯೇ ನಮ್ಮ ಆಹಾರಪದ್ಧತಿಯಲ್ಲಿ ಶ್ರದ್ಧೆಯಿರಬೇಕು. ಪರಿಶ್ರಮ ಪಡುವ ದಿನಗಳು ಇಂದು ಕಡಿಮೆಯಾಗಿದೆ. ನಿರೀಕ್ಷೆಗಳು ಹೆಚ್ಚಾಗಿದೆ ಎಂದು ಹೇಳುವ ಮೂಲಕ ಪ್ರಾಮಾಣಿಕತೆ, ಪ್ರೀತಿ, ಗೌರವ ಇಟ್ಟುಕೊಳ್ಳುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಸಾಧನೆ ಮಾಡಿದಷ್ಟು ಸವಾಲುಗಳು ಹೆಚ್ಚಾಗುತ್ತವೆ, ಅವುಗಳನ್ನು ಮೆಟ್ಟಿ ನಿಲ್ಲವ ಧೈರ್ಯವನ್ನು ರೂಢಿಸಿಕೊಳ್ಳಬೇಕು ಎಂದರಲ್ಲದೆ, ಕೃಷಿಗೆ ಮುಂದೆ ಭವಿಷ್ಯವಿದೆ. ಅದನ್ನು ತಾತ್ಸಾರ ಮಾಡುವಂತಿಲ್ಲ ಎಂದರು.
ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.ರಾಜ್ಯದಲ್ಲಿಯೇ ಹೆಸರು ಮಾಡಿರುವ ಕಾಲೇಜುಗಳ ಪಟ್ಟಿಯಲ್ಲಿರುವ ಕಲಾ ಕಾಲೇಜಿಗೆ ತಮ್ಮದೇ ಆದ ವೈಶಿಷ್ಟವಿದೆ. ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಾಲೇಜಿನಲ್ಲಿರುವ ಅಧ್ಯಾಪಕರ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಮುನ್ನಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಪ್ರಾಸ್ತಾವಿಕವಾಗಿ ಮಾತನಾಡಿದ ಪಿ.ಆರ್.ಶಾಂತಾ, ಪ್ರತಿಭೆಗಳ ಅನಾವರಣಕ್ಕೆ ಇಂತಹ ವೇದಿಕೆಗಳು ಅವಶ್ಯಕ. ಸಾಧಕರ ಜೀವನ ಬಿದಿರಿನಂತೆ. ಸಮಸ್ಯೆಯನ್ನು ಮೆಟ್ಟಿ ನಿಂತರೆ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕಾಲೇಜು ಹೆಸರು ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಪ್ರಾಂಶುಪಾಲರಾ ಡಾ. ಎಂ.ಬಿ. ಇರ್ಷಾದ್ ಮಾತನಾಡಿ, ಸಂಸ್ಕಾರ ಮತ್ತು ಸಂಸ್ಕೃತಿ ಉತ್ತಮವಾಗಿದ್ದರೆ ಎಲ್ಲವೂ ಒಳಿತಾಗುತ್ತದೆ. ನಮ್ಮ ಜೀವನ ಹೇಗಿರಬೇಕೆಂದರೆ ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಇಂದು ಅನಾಥಾಶ್ರಮ, ವೃದ್ಧಾಶ್ರಮಗಳು ಹೆಚ್ಚಾಗಿದೆ. ಅದಕ್ಕೆ ಮುಖ್ಯ ಕಾರಣ ಅಕ್ಷರಸ್ಥರೇ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕ್ರೀಡಾ ಮತ್ತು ಇನ್ನಿತರೆ ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಶಾಸಕರು ಮತ್ತು ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಶೈಕ್ಷಣಿಕ ಡೀನ್ ಪ್ರೊ. ಡಿ.ಎಸ್.ರಾಜು, ಪರೀಕ್ಷಾ ನಿಯಂತ್ರಕ ಕೆ.ಡಿ. ಮುರುಳೀಧರ್, ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಕನ್ನಡ ವಿಭಾಗದ ಮುಖ್ಯಸ್ಥ ಎಚ್.ಡಿ. ದೇವರಾಜು, ವಾಣಿಜ್ಯ ವಿಭಾಗದ ಅಧ್ಯಾಪಕ ಡಾ. ಸವಿತಾ, ದೈಹಿಕ ಶಿಕ್ಷಣ ನಿರ್ದೇಶಕ ಜಿ.ಕೆ.ಪವನ್ ಸೇರಿದಂತೆ ವಿವಿಧ ಘಟಕಗಳ ಸಂಚಾಲಕರು ಮತ್ತು ಪ್ರಾಧ್ಯಾಪಕರು, ಉಪನ್ಯಾಸಕರು ಹಾಜರಿದ್ದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.