ಚಾಮರಾಜನಗರ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರ ಕುರಿತು ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಉತ್ತರ ನೀಡುವ ಮೂಲಕ ಬಹುಮಾನವನ್ನು ಪಡೆದುಕೊಂಡರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕನ್ನಡದ ನಂ.1 ವಿಜಯವಾಣಿ ದಿನಪತ್ರಿಕೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕ್ವಿಜ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಿಳಾ ಅಧಿಕಾರಿಗಳು, ಮಹಿಳಾ ಸಾಹಿತಿಗಳು, ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಮಹಿಳೆಯರು, ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಮಹಿಳೆಯರು, ಜಿಲ್ಲೆಯ ಪ್ರಸಿದ್ಧ ಸ್ಥಳಗಳು ಹಾಗೂ ಇನ್ನಿತರ ವಿಷಯಗಳ ಕುರಿತಾಗಿ ಕ್ವಿಜ್‌ನಲ್ಲಿ ಪ್ರಶ್ನೆಗಳನ್ನು ಕೇಳಲಾಯಿತು.
ಮೊದಮೊದಲು ಕೆಲವು ಪ್ರಶ್ನೆಗಳಿಗೆ ಖಚಿತ ಉತ್ತರ ನೀಡಲು ವಿದ್ಯಾರ್ಥಿಗಳು ಹಿಂಜರಿಕೆ ತೋರಿಸಿದರೂ, ಬಳಿಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವ ಮೂಲಕ ಸಹಪಾಠಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಕೇಳಿದ ಪ್ರಶ್ನೆಗಳಿಗೆ ಕರಾರುವಕ್ಕಾಗಿ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಸ್.ಆರ್.ದೀಪಾ, ಡಾ.ಬಿ.ಆರ್.ರಾಜಣ್ಣ, ಪರಮೇಶ್, ಬಾಲಸುಬ್ರಮ್ಮಣ್ಯಂ, ರಾಘವೇಂದ್ರ, ಸೌಮ್ಯ, ಸತೀಶ್ ಕುಮಾರ್, ಸಿದ್ದರಾಜು, ಡಾ.ಎಂ.ಸಿ.ಪ್ರಭಾವತಿ, ಡಾ.ರುಕ್ಮೀಣಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ಮುಖ್ಯ:
ಪ್ರಸ್ತುತ ಹೆಣ್ಣು ಮಕ್ಕಳು ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇಯಾದ ಸಾಧನೆ ಮಾಡುತ್ತಿದ್ದು, ಮತ್ತಷ್ಟು ಉನ್ನತ ಸಾಧನೆಗಳನ್ನು ಮಾಡಲು ಆತ್ಮವಿಶ್ವಾಸ ಬಹುಮುಖ್ಯವಾಗಿದೆ ಎಂದು ಖ್ಯಾತ 3ಡಿ ಪೋಟೋ ಗ್ರಾರ್ ಎ.ಎನ್.ಶೃತಿ ಅಜಿತ್ ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಹಿಂಜರಿಕೆ ಮನೋಭಾವ ಇಟ್ಟುಕೊಳ್ಳಬಾರದು. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮದೇಯಾದ ಸಾಧನೆ ಮಾಡಬೇಕು. ಮುಂದುವರಿದ ಜಗತ್ತಿನಲ್ಲಿ ಹಲವಾರು ಅವಕಾಶಗಳು ಇದ್ದು, ಅವುಗಳಿಗೆ ಮಹಿಳೆಯರು ದಾಪುಗಾಲು ಹಾಕಬೇಕು. ಪ್ರತಿಯೊಬ್ಬ ಹೆಣ್ಣು ಮಕ್ಕಳು ಒಂದು ಕನಸನ್ನು ಇಟ್ಟುಕೊಂಡು, ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾಗಬೇಕು. ಶಿಕ್ಷಕರು ಹೆಮ್ಮೆ ಪಡುವಂತೆ ವಿದ್ಯಾರ್ಥಿನಿಯರು ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಧನಾತ್ಮಕ ಚಿಂತನೆ ಬೆಳೆಸಿಕೊಳ್ಳಿ:
ಹೆಣ್ಣುಮಕ್ಕಳು ಪಾಲಕರು ನೀಡಿದ ಪ್ರೋತ್ಸಾಹವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು, ಧನಾತ್ಮಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಾಮಾಜಿಕ ಅರಣ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಭ್ಯಶ್ರೀ ಹೇಳಿದರು. ಜಿಲ್ಲೆಯಲ್ಲಿ ಇಂದಿಗೂ ಹೆಣ್ಣು ಮ್ಕಳಿಗೆ ಸೂಕ್ತ ಅವಕಾಶಗಳನ್ನು ನೀಡುವುದಿಲ್ಲ. ಅವರಲ್ಲಿರುವ ಕೀಳರಿಮೆಯಿಂದ ಗಂಡು ಮಕ್ಕಳಿಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. ಅದೆಲ್ಲವೂ ಇತ್ತೀಚೆಗೆ ಕಡಿಮೆಯಾಗುತ್ತಾ ಬರುತ್ತಿದ್ದು, ಹೆಣ್ಣು ಮಕ್ಕಳು ಪಾಲಕರು ನೀಡಿದ ಪ್ರೋತ್ಸಾಹವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕು. ಶಿಕ್ಷಣದ ಜತೆಜತೆಗೆ ಯಾವುದಾದರೊಂದು ಕೌಶಲ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಹಿಳೆಯರು ಯಾವುದೇ ಮುಜುಗರವನ್ನು ಇಟ್ಟುಕೊಳ್ಳದೇ ಸಾಧನೆಯ ಹಾದಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರಶ್ನೆ ಮಾಡುವ ಮನೋಭಾವನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಯುವಜನಾಂಗ ಹೆಚ್ಚಾಗಿ ಮೊಬೈಲ್ ಮೇಲೆ ಅವಲಂಬಿತರಾಗಿದ್ದಾರೆ. ಓದುವ ಸಮಯದಲ್ಲಿ ಅದರಿಂದ ಆದಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು. ಮಹಿಳಾ ದಿನಾಚರಣೆಯಲ್ಲಿ ಒಂದು ದೃಢ ನಿರ್ಧಾರವನ್ನು ಕೈಗೊಂಡು, ಉನ್ನತ ಶಿಕ್ಷಣವನ್ನು ಪಡೆದು ಸಾಧನೆಯತ್ತ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಬಹುಮಾನ ವಿಜೇತರು:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ವಿಜ್ ಸ್ಪರ್ಧೆಯಲ್ಲಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿಗಳಾದ ಎಸ್.ಸೌಂದರ್ಯ, ವಿಜಯಕುಮಾರಿ, ಎಂ.ಪದ್ಮ, ಜಿ.ನಾಗಲಾಂಬಿಕ, ಆರ್.ರಕ್ಷಿತಾ, ರೇಣುಕಾ, ಆರ್.ರಾಜೇಶ್ವರಿ, ಯಶೋಧ, ವರಮಹಾಲಕ್ಷ್ಮೀ, ಯಶಸ್ವಿನಿ, ಗೌರಮ್ಮ, ಪಿ.ಮಹೇಶ್ವರಿ, ಮೇಘಾ ಬಾಯಿ, ಬೇಬಿ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.
ಮಹಿಳೆಯರು ತಮ್ಮ ಕುಟುಂಬವನ್ನು ಮುನ್ನೆಡೆಸುವ ಮೂಲಕ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳು ಅಬಲೆಯಲ್ಲ, ಅವಳಿಗೆ ಅವಕಾಶಗಳು ಸಿಕ್ಕರೇ ಎಂತಹ ಸಾಧನೆಯನ್ನಾದರೂ ಮಾಡುತ್ತಾಳೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣವನ್ನು ಪಡೆಯಬೇಕು.
-ಸುಮತಿ, ಪ್ರಾಂಶುಪಾಲ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಚಾ.ನಗರ
ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದುಕೊಳ್ಳಲು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಅತ್ಯಂತ ಸಹಕಾರಿಯಾಗಿದೆ. ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಹೆಣ್ಣುಮಕ್ಕಳನ್ನು ತಮ್ಮ ಮನೆಯ ಮಕ್ಕಳಂತೆ ಕಾಣುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅಗತ್ಯ ಪ್ರೋತ್ಸಾಹ ದೊರೆಯುತ್ತಿದೆ.
-ಜಿ.ಬಂಗಾರು, ಅಧ್ಯಕ್ಷ, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ, ಚಾಮರಾಜನಗರ