ಪ್ರತಿಯೊಂದಕ್ಕೂ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆಗೆ ನೋಡುವುದು ಹಾಗೂ ಅವರನ್ನು ಅನುಸರಿಸುವುದನ್ನು ಬಿಡಬೇಕು. ನಾವು ನಮ್ಮದೇ ಹಾದಿಯಲ್ಲಿ ಸಾಗಬೇಕು ಎಂದು ಹೆಲ್ತ್ ಕೇರ್ ಗ್ಲೋಬಲ್ (ಎಚ್‌ಸಿಜಿ) ಎಂಟರ್ಪ್ರೈಸಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಅಜಯ್ ಕುಮಾರ್ ಕರೆ ನೀಡಿದರು.
ದಿ ಇಂಡಸ್ ಎಂಟರ್‌ಪ್ರೈನರ್ (ಟಿಐಇ) ಮೈಸೂರು ಸಂಸ್ಥೆ ಮೈಸೂರು ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯಮ ಆರೋಹ್ಯತೆ ಮತ್ತು ಸುಸ್ಥಿರತೆ ವಿಷಯಾಧಾರಿತ ಸಮ್ಮೇಳನ- ಟೈಕಾನ್ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಯಾವುದಾ ದರು ವಿಷಯ ಚರ್ಚೆಗೆ ಬಂದರೆ ಪಾಶ್ಚಿಮಾತ್ಯ ರಾಷ್ಟ್ರಗಳ ಕಡೆ ನೋಡುತ್ತೇವೆ. ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಇದ್ದು, ನಮ್ಮ ದೇಶದ ವೈದ್ಯರುಗಳು ವಿಶ್ವದ ಹಲವು ರಾಷ್ಟ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಉತ್ತಮ ವೈದ್ಯರಾಗಿ ಹೆಸರುವಾಸಿಯಾಗಿದ್ದಾರೆ. ನಮ್ಮಲ್ಲಿ ಬುದ್ಧಿವಂತರು ಹಾಗೂ ವೈದ್ಯಕೀಯ ಸೌಲಭ್ಯಗಳಿಗೇನು ಕೊರತೆ ಇಲ್ಲ ಎಂದು ಹೇಳಿದರು.
ನವೋದ್ಯೋಮ ಪ್ರಾರಂಭಕ್ಕೆ ಪೂರಕ ವಾತಾವರಣ
ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಪ್ರಾರಂಭ ಮಾಡಲು ಮುಂದಾದ ಸಂದರ್ಭ ಉದ್ಯಮ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ಇರಲಿಲ್ಲ. ಆ ಸಂದರ್ಭ ನವೋದ್ಯಮ ಎಂಬ ಪರಿಕಲ್ಪನೆ ಇರಲಿಲ್ಲ. ಇದೀಗ ನವೋದ್ಯಮಗಳಿಗೆ ಉತ್ತೇಜನ ದೊರೆಯುತ್ತಿದ್ದು, ಅದನ್ನು ಬಳಸಿಕೊಳ್ಳ ಬೇಕು. ಯಾವುದೇ ಉದ್ಯಮ ಪ್ರಾರಂಭ ಮಾಡಿದರೂ ನಾನು ಯಾವ ಉದ್ದೇಶಕ್ಕೆ ಉದ್ಯಮ ಪ್ರಾರಂಭ ಮಾಡುತ್ತಿದ್ದೇನೆ ಎಂಬ ಅರಿವು ಇರಬೇಕು. ಆ ಉದ್ದೇಶದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಬಾರದು. ನಮ್ಮ ಉದ್ದೇಶ ಬದಲಾದರೆ ಯಶಸ್ಸು ದೊರೆಯುವುದಿಲ್ಲ. ಯಶಸ್ಸು ಗಳಿಸಲು ಸರಿಯಾದ ಮಾರ್ಗದಲ್ಲಿಯೇ ನಡೆಯಿರಿ, ಯಶಸ್ಸಿಗೆ ಯಾವುದೇ ಅಡ್ಡದಾರಿಗಳು ಇಲ್ಲ ಎಂದು ಕಿವಿಮಾತು ಹೇಳಿದರು.
ಬದುಕಿನಲ್ಲಿ ಸೋಲುಗಳು ಎದುರಾದರೆ ದೃತಿಗೆಡಬೇಡಿ, ಸೋಲು ಎದುರಾದರೆ ಸೋಲನ್ನು ಕೂಡ ಸಂಭ್ರಮಿಸಿ. ನಾನು ಸೋಲನ್ನು ಸಂಭ್ರಮಿಸುತ್ತೇನೆ, ಏಕೆಂದರೆ ಸೋಲುಗಳು ನಮಗೆ ಪಾಠಗಳನ್ನು ಕಲಿಸಿವೆ. ಸೋಲಿನ ಪಾಠಗಳೇ ನಮ್ಮನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುತ್ತದೆ. ಬದುಕಿನಲ್ಲಿ ಯಶಸ್ಸು ಕಾಣಲು ಸೋಲು ಕೂಡ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದು ಹೇಳಿದರು.
ದಿ ಇಂಡಸ್ ಎಂಟರ್‌ಪ್ರೈನರ್ ಮೈಸೂರು ಅಧ್ಯಕ್ಷ ಸುಧನ್ವ ಧನಂಜಯ ಮಾತನಾಡಿ, ಉದ್ಯಮಿಗಳು ಬೆಂಗಳೂರಿನ ನಂತರ ಮೈಸೂರಿ ನಲ್ಲಿ ಹೂಡಿಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಸಾಕಷ್ಟು ಉದ್ಯಮಿಗಳು ಮೈಸೂರಿನಲ್ಲಿ ನೆಲೆಸುತ್ತಿದ್ದಾರೆ. ನಗರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನವೋದ್ಯಮಗಳು ಪ್ರಾರಂಭವಾಗುತ್ತಿದೆ ಎಂದರು.
ಈ ಸಂದರ್ಭ ಈ ಸಂದರ್ಭ ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ದಿ ಡೆಕೋರೇಟಿವ್ ಲ್ಯಾಮಿನೇಟ್ಸ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಬ್ಬಾಸ್ ಎಸ್. ವಾಘ್, ವಿಡಬ್ಲುೃಎಫ್‌ನ ಸಿಎಂಡಿ ಬಿ.ಆರ್. ಪೈ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಟೈಕಾನ್ ಅಧ್ಯಕ್ಷ ನಾಗರಾಜನ್ ಶ್ರೀನಿವಾಸನ್, ಸಹ ಅಧ್ಯಕ್ಷ ಡಾ. ಮಹೇಶ್ ರಾವ್, ರಂಗ್‌ಸನ್ಸ್ ವ್ಯವಸ್ಥಾಪಕ ನಿರ್ದೇಶಕ ಪವನ್ ರಂಗ ಹಾಗೂ ಇತರರು ಇದ್ದರು.