ಜಿಲ್ಲೆ

ಪ್ರತಿಭೆಗಳಿಗೆ ಫ್ರೆಂಡ್ಸ್ ಯೂತ್‌ಕ್ಲಬ್ ವೇದಿಕೆ

Kodagu

ಸುಂಟಿಕೊಪ್ಪ: ಕಲಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಲು ಫ್ರೆಂಡ್ಸ್ ಯೂತ್‌ಕ್ಲಬ್ ವೇದಿಕೆಯಾಗುತ್ತಿದೆ ಎಂದು ವಿ.ಪಿ.ಶಶಿಧರ್ ಹೇಳಿದರು.

ನಾಕೂರು ಕಾನ್‌ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ 23ನೇ ವಾರ್ಷಿಕೋತ್ಸವದ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡ್ಯಾನ್ಸ್ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸ್ಥಳೀಯ, ರಾಜ್ಯ ಮಟ್ಟದ ಮಾಧ್ಯಮಗಳು ಕಲೆ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ಕುಗ್ರಾಮಗಳಲ್ಲಿ ಅಡಗಿರುವ ಅದೆಷ್ಟೋ ಕಲಾ ಪ್ರತಿಭೆಗಳನ್ನು ಹುಡುಕಿ ವೇದಿಕೆ ಒದಗಿಸಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಲಾಗುತ್ತಿವೆ. ಆ ವೇದಿಕೆಯೊಂದಿಗೆ ಪ್ರತಿಭೆಗಳಿಗೆ ಸೂಕ್ತ ಸ್ಥಾನಮಾನ ಒದಗಿಸುವಲ್ಲಿ ಕೆಲವು ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಡ್ಯಾನ್ಸ್‌ಮೇಳ ಕಾರ್ಯಕ್ರಮದ ದಾನಿಗಳಾದ ಕಾಫಿ ಬೆಳೆಗಾರರಾದ ಅಡಿಕೇರಿ ಧರ್ಮಪ್ಪ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಮಂದೋಡಿ ಸಿ.ಜಗನ್ನಾಥ್, ಮಾಜಿ ಅಧ್ಯಕ್ಷ ಬಿ.ಜಿ. ರಮೇಶ್, ಹಾರಂಗಿ ಕಾವೇರಿ ಮೀನುಗಾರರ ಸಂಘ ಅಧ್ಯಕ್ಷ ಮಹಮದ್, ಫ್ರೆಂಡ್ಸ್ ಯೂತ್ ಕ್ಲಬ್ ಅಧ್ಯಕ್ಷ ಅಂಬೆಕಲ್ ಚಂದ್ರಶೇಖರ್, ಗೌರವಾಧ್ಯಕ್ಷ ಕುಂಞಕೃಷ್ಣ, ಕಾರ್ಯದರ್ಶಿ ಶಂಕರ ನಾರಾಯಣ, ಸದಸ್ಯ ಕಿಟ್ಟಣ್ಣರೈ ಮತ್ತಿತರರು ಇದ್ದರು.

ಇದೇ ಸಂದರ್ಭ ಗ್ರಾಮೀಣ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಕಬಡ್ಡಿ ವಿಭಾಗದಲ್ಲಿ ಭಜರಂಗಿ ಪ್ರೆಂಡ್ಸ್ ಪ್ರಥಮ, ಸೆವೆನ್ ಸ್ಟಾರ್ ದ್ವಿತೀಯ ಬಹುಮಾನ ಪಡೆದುಕೊಂಡವು. ಪ್ರೌಢಶಾಲಾ ವಿಭಾಗದಲ್ಲಿ ಟೀಂ ಅಫಿಷಿಯಲ್ ಪ್ರಥಮ, ನವೀನ್ ಎಫ್.ಸಿ. ದ್ವಿತೀಯ, ಮುಕ್ತ ಕಬಡ್ಡಿ ಪಂದ್ಯಾವಳಿಯಲ್ಲಿ ಬಿವೈಸಿ ಮಳ್ಳೂರು ಪ್ರಥಮ, ವಿರಾಜಪೇಟೆ ಫ್ರೆಂಡ್ಸ್ ದ್ವಿತೀಯ, ಪಂಚಲಿಂಗೇಶ್ವರ ಟೀಂ ತೃತೀಯ ಸ್ಥಾನ ಪಡೆದುಕೊಂಡವು.

ಸ್ಥಳೀಯ ಮಹಿಳೆಯರಿಗೆ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಲೀಲಾವತಿ ಫ್ರೆಂಡ್ಸ್ ಪ್ರಥಮ, ಯುವಬಳಗ ಮಂಜಿಕೆರೆ ದ್ವಿತೀಯ ಸ್ಥಾನ. ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಟೀಂಬರ್ ಬಾಯ್ಸ ಮಳ್ಳೂರು ಪ್ರಥಮ, ಫ್ರೆಂಡ್ಸ್ ಯೂತ್ ಕಾನ್‌ಬೈಲ್ ದ್ವಿತೀಯ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಲೀಲಾವತಿ ಫ್ರೆಂಡ್ಸ್ ಪ್ರಥಮ, ನಾಕೂರು ಕಾಲನಿ ದ್ವಿತೀಯ ಸ್ಥಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ನೀಡಿದರು.