ಜಿಲ್ಲೆ

ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕ್ರೀಡಾಕೂಟ ಅಗತ್ಯ

ಸಿಂಧನೂರು: ಯುವಕರು ಕ್ರೀಡಾಸಕ್ತಿ ಬೆಳೆಸಿಕೊಳ್ಳಬೇಕು. ಓದಿನ ಜತೆಗೆ ಕ್ರೀಡೆಯೂ ಅಗತ್ಯ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ರಾಯಚೂರು ವಿಶ್ವವಿದ್ಯಾಲಯ ಹಾಗೂ ಎಕ್ಸಲೆಂಟ್ ಪದವಿ ಮಹಾವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಏಕವಲಯ ಪುರುಷರ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ವಿದ್ಯೆಯಷ್ಟೇ ಕ್ರೀಡೆಗೂ ಹೆಚ್ಚಿನ ಬೆಲೆ ಇದೆ. ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಇಂಥ ಕ್ರೀಡಾಕೂಟಗಳು ಅಗತ್ಯ ಎಂದರು.

ಸಿಂಧನೂರು ತಾಲೂಕಿನಲ್ಲಿ ಒಳ್ಳೆಯ ಕ್ರೀಡಾಪಟುಗಳಿದ್ದು, ಅವರಿಗೆ ವೇದಿಕೆ ಒದಗಿಸುವ ಕೆಲಸವಾಗಬೇಕಿದೆ. ವಾಲಿಬಾಲ್ ಆಟದಲ್ಲಿ ಕೈಚಳಕ ತೋರಿಸಿದರೆ ಮಾತ್ರ ಗೆಲ್ಲಬಹುದಾಗಿದೆ. ಆಯಾ ಆಟಗಳಲ್ಲಿ ಚಾಣಾಕ್ಷತನ ಪ್ರದರ್ಶನ ಮಾಡಬೇಕು. ಸೋಲು-ಗೆಲವು ಸಮನಾಗಿ ಸ್ವೀಕರಿಸುವ ಭಾವನೆ ಬೆಳೆಸಿಕೊಳ್ಳಬೇಕು. ದೇಹ ದಂಡಿಸುವ ಕೆಲಸ ನಿರಂತರ ನಡೆಯಬೇಕು. ಅಂದಾಗ ಆರೋಗ್ಯ ಚೆನ್ನಾಗಿರಲಿದೆ ಎಂದು ಶಾಸಕ ಬಾದರ್ಲಿ ತಿಳಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ತಹಸೀಲ್ದಾರ್ ಅರುಣ್ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಪಾಟೀಲ್ ಶಿಕ್ಷಣ ಸಂಸ್ಥೆ ಸಿಂಡಿಕೇಟ್ ಸದಸ್ಯ ಆರ್.ಸಿ.ಪಾಟೀಲ್, ಎಕ್ಸಲೆಂಟ್ ಕಾಲೇಜ್ ಕಾರ್ಯದರ್ಶಿ ಎಂ.ವೆಂಕಟರಾವ್, ಪ್ರಾಂಶುಪಾಲ ಮಂಜುನಾಥ ಸೋಮಲಾಪುರ, ಉಪನ್ಯಾಸಕ ಎಚ್.ಡಿ.ಹಳ್ಳೂರು, ಖಾಸಿಂ ಖುರೇಷಿ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಶಿವು, ದೈಹಿಕ ಶಿಕ್ಷಣ ಶಿಕ್ಷಕ ವಸಂತ, ದೈಹಿಕ ಶಿಕ್ಷಣ ಶಿಕ್ಷಕ ಪಂಪನಗೌಡ ಇದ್ದರು.