ಬೇಲೂರು: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೆಬ್ಬಾಳು ಕ್ಲಸ್ಟರ್‌ನ ಸಮೂಹ ಸಂಪನ್ಮೂಲಾಧಿಕಾರಿ ಬಸವರಾಜು ಹೇಳಿದರು.
ಬೇಲೂರು ತಾಲೂಕಿನ ದೊಡ್ಡಬ್ಯಾಡಿಗೆರೆ ಗ್ರಾಮದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಹೆಬ್ಬಾಳು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಚಿಕ್ಕಂದಿನಲ್ಲೆ ನಮ್ಮ ಸಂಸ್ಕಾರ, ಸಂಸ್ಕೃತಿ ಕುರಿತು ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ. ಅಲ್ಲದೆ ಮಕ್ಕಳಿಗಾಗಿ ನಡೆಯುವ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ವೇಷ ಧರಿಸಿದ ಮಕ್ಕಳನ್ನು ನೋಡುವುದೆ ಸಂತೋಷದ ಸಂಗತಿಯೊಂದಿಗೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗಲಿದೆ ಎಂದರು.
ಪತ್ರಕರ್ತ ಹೆಬ್ಬಾಳು ಹಾಲಪ್ಪ, ಹೆಬ್ಬಾಳು ಗ್ರಾಪಂ ಅಧ್ಯಕ್ಷ ನಾಗರಾಜು, ಮುಖ್ಯಶಿಕ್ಷಕ ಗುರುಮೂರ್ತಿ, ಶಿಕ್ಷಕರಾದ ರಮೇಶಪ್ಪ, ದೇವರಾಜ್, ಶಂಕರಪ್ಪ, ಪಲ್ಲವಿ, ತಮ್ಮಣ್ಣಗೌಡ, ನಳಿನ, ಶಿವೇಗೌಡ, ಜಯಶ್ರೀ, ರೇವಣ್ಣ, ಹುಲಿಗಮ್ಮ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಟರಾಜ್, ಸದಸ್ಯರಾದ ದೇವೇಂದ್ರಪ್ಪ, ಶಶಿಕಲಾ ಇತರರಿದ್ದರು.