ಜಿಲ್ಲೆ

ಪ್ರತಿಭೆ ಪ್ರದರ್ಶನದಲ್ಲಿ ಕೀಳರಿಮೆ ಬೇಡ :  ನಿರ್ಮಲಾನಂದನಾಥಶ್ರೀ

ಚಿಕ್ಕಬಳ್ಳಾಪುರ : ಸ್ವಸಾಮರ್ಥ್ಯ ಮತ್ತು ಉತ್ತಮ ಮಾರ್ಗದರ್ಶನದಿಂದ ಪ್ರತಿಭೆ ಹೆಚ್ಚಿಸಿಕೊಂಡು ಗೌರವಕ್ಕೆ ಪಾತ್ರರಾಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಕ್ಕಳಿಗೆ ಸಲಹೆ ನೀಡಿದರು.

ನಗರದ ಎಸ್‌ಜೆಸಿಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಪ್ರತಿಭೆ ಪ್ರದರ್ಶನ ಒಂದು ನಿರಂತರ ಪ್ರಕ್ರಿಯೆ. ಆದರೆ, ಬಹಳಷ್ಟು ಮಕ್ಕಳು ಕೀಳರಿಮೆಯಿಂದಾಗಿ ಬೆಳಕಿಗೆ ಬರುವುದಿಲ್ಲ. ವಿದ್ಯಾರ್ಥಿಗಳಲ್ಲಿನ ಇಂತಹ ಮನೋಭಾವನೆಯನ್ನು ಪಾಲಕರು ಮತ್ತು ಶಿಕ್ಷಕರು ದೂರ ಮಾಡಬೇಕು ಎಂದು ತಿಳಿಸಿದರು.

ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲೂ ಇದ್ದೇ ಇರುತ್ತದೆ, ಆದರೆ ಅದನ್ನು ಸಕಾಲದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅಭಿಪ್ರಾಯಪಟ್ಟರು.

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಶಾಲೆಯ ನಾಲ್ಕು ಗೋಡೆಗಳಲ್ಲಿ ಬಂಧಿಸದೇ ಮುಕ್ತ ವಾತಾವರಣದಲ್ಲಿ ಕಲಿಕೆ ನೀಡಬೇಕು. ಅವರವರ ಆಸಕ್ತಿ ತಿಳಿದುಕೊಂಡು ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಪ್ರತಿಭಾವಂತರನ್ನಾಗಿಸಬೇಕು ಎಂಬ ಸಲಹೆಯಿತ್ತರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್, ಬಿಜಿಎಸ್ ಆಡಳಿತಾಧಿಕಾರಿ ಪ್ರೊ.ಶಿವರಾಮರೆಡ್ಡಿ, ಪ್ರಾಂಶುಪಾಲರಾದ ಎಂ.ರವಿಕುಮಾರ್, ಗೀತಾ ಮತ್ತಿತರರು ಇದ್ದರು.