ಬಸವಕಲ್ಯಾಣದ ತ್ರಿಪುರಾಂತ ಗವಿಮಠದಲ್ಲಿ ಟೋಕರಿ ಕೋಳಿ (ಕಬ್ಬಲಿಗ) ಸಮಾಜ ಸರ್ಕಾರಿ ನೌಕರರ ಸಂಘದಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ಶ್ರೀ ದತ್ತಾತ್ರೇಯ ಮಹಾರಾಜ, ಶಾಸಕ ಶರಣು ಸಲಗರ, ಮಾಜಿ ಎಂಎಲ್ಸಿ ವಿಜಯಸಿಂಗ್, ಮಾಲಾ ಬಿ.ನಾರಾಯಣರಾವ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಗನ್ನಾಥ ಜಮಾದಾರ, ನೀಲಕಂಠ ರಾಠೋಡ, ಅರ್ಜುನ ಕನಕ, ದಿಲೀಪ ಸಿಂಧೆ ಇದ್ದರು. 
ಜಿಲ್ಲೆ

ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಅಗತ್ಯ

ಬಸವಕಲ್ಯಾಣ: ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಿದರೆ ಬೇರೆ ಮಕ್ಕಳಿಗೆ ಪ್ರೇರಣೆ ಸಿಕ್ಕಂತಾಗುತ್ತದೆ ಎಂದು ಶಾಸಕ ಶರಣು ಸಲಗರ ಹೇಳಿದರು.

ತಾಲೂಕು ಟೋಕರಿ ಕೋಳಿ (ಕಬ್ಬಲಿಗ) ಸಮಾಜ ಸರ್ಕಾರಿ ನೌಕರರ ಸಂಘದಿಂದ ತ್ರಿಪುರಾಂತದ ಸಂಸ್ಥಾನ ಗವಿಮಠದಲ್ಲಿ ಭಾನುವಾರ ಆಯೋಜಿಸಿದ್ದ ೨೦೨೪ರ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರ ಸನ್ಮಾನ ಸಮಾರಂಭ ಉದ್ಘಾಟಿಸಿದ ಅವರು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ನೀಡುತ್ತಿರುವುದನ್ನು ಶ್ಲಾಘಿಸಿದರು.

ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು. ಟೋಕರಿ ಕೋಳಿ ಸಮಾಜದ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರ ಅನುಕೂಲಕ್ಕಾಗಿ ಪರಿಶಿಷ್ಟ ಪಂಗಡ(ಎಸ್ಟಿ) ಪ್ರಮಾಣಪತ್ರ ಕೊಡಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೋಳಿಸಿದೆ. ಸದುಪಯೋಗ ಮಾಡಿಕೊಂಡು ಜೀವನದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ ಆಶೀರ್ವಚನ ನೀಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್ ಮಾತನಾಡಿದರು.

ಹಳ್ಳಿಖೇಡ(ಕೆ) ವಾಡಿಯ ಶ್ರೀ ದತ್ತಾತ್ರೇಯ ಮಹಾರಾಜ ಸಾನ್ನಿಧ್ಯ ವಹಿಸಿದ್ದರು. ಪ್ರಮುಖರಾದ ಧನರಾಜ ತಾಳಂಪಳ್ಳಿ, ಜಗನ್ನಾಥ ಜಮಾದಾರ, ನೀಲಕಂಠ ರಾಠೋಡ, ಅಲಿಸಾಬ್, ಪಾಂಡುರಂಗ ಗುರೂಜಿ, ಕಾಳಿದಾಸ ವಾಡೇಕರ್, ಮಾಣಿಕ ನೇಳಗಿ, ವೈಜಿನಾಥ ಫುಲೆ, ಮಲ್ಲಿಕಾರ್ಜುನ ಬೊಕ್ಕೆ, ದತ್ತು ಪದ್ಮೆ, ಸುನೀಲ ಭಾವಿಕಟ್ಟಿ, ಅಶೋಕ ಮಾಲಿಬಿರಾದಾರ, ಗೋವಿಂದ ಚಾಮಾಲೆ, ದಿಲೀಪ ಗಿರಗಂಟೆ, ಈಶ್ವರ ಸೋನಾರ, ದಿಲೀಪ ಶಿಂಧೆ, ಶಂಕರ್ ಜಮಾದಾರ, ಅರ್ಜುನ ಕನಕ, ರಾಜಕುಮಾರ ಇರ್ಲೆ, ನಾಗನಾಥ ಚಾಮಾಲೆ ಇತರರಿದ್ದರು.

ಸಮಾಜ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚನ್ನವೀರ ಜಮಾದಾರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ತುಕಾರಾಮ ರೊಡ್ಡೆ ಮತ್ತು ಗೋವಿಂದ ಚಿಟಂಪಲ್ಲೆ ನಿರೂಪಣೆ ಮಾಡಿದರು. ನೀಲಕಂಠ ಎಕ್ಕಂಬೆ ವಂದಿಸಿದರು.

ರಾಷ್ಟ್ರಪತಿ ಪದಕ ಮತ್ತು ಕೇಂದ್ರೀಯ ಗೃಹ ಮಂತ್ರಿ ದಕ್ಷತಾ ಪದಕ ಪುರಸ್ಕೃತ ಕಲಬುರಗಿ ಡಿವೈಎಸ್‌ಪಿ(ಐಎಸ್‌ಡಿ) ಕೆ.ಬಸವರಾಜ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಶೇ.೮೦ಕ್ಕೂ ಅಧಿಕ ಅಂಕ ಪಡೆದ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಎಂಬಿಬಿಎಸ್, ಐಐಟಿಗೆ ಪ್ರವೇಶ ಪಡೆದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ನಿವೃತ್ತ ಮತ್ತು ಸರ್ಕಾರಿ ಸೇವೆಗೆ ಸೇರಿದ ನೌಕರರನ್ನೂ ಸನ್ಮಾನಿಸಲಾಯಿತು.