ಹೊಸಕೋಟೆ: ಕರೊನಾದಿಂದ ಕಾಲೇಜುಗಳಲ್ಲಿ ಪಾಠ ಪ್ರವಚನಗಳು, ಕ್ರೀಡೆ. ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲದೇ ಬೇಸರದಿಂದ ವಿದ್ಯಾರ್ಥಿಗಳಿಗೆ ಶಿವಮೊಗ್ಗ ರಂಗಾಯಣ ಒಂದು ಉತ್ತಮವಾದ ವೇದಿಕೆ ನೀಡಿ, ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ನೀಡಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೆಶಕ ಸಂದೇಶ್ ಜವಳಿ ಅಭಿಪ್ರಾಯಪಟ್ಟರು.
ನಗರದ ಹೊರವಲಯ ನಿಂಬೆಕಾಯಿಪುರದ ಜನಪದರು ವೇದಿಕೆಯಲ್ಲಿ ಆಯೋಜಿಸಿದ್ದ ಬೆಂಗಳೂರು ನಗರ ಜಿಲ್ಲಾ ಕಾಲೇಜು ರಂಗೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಜ್ಯದ ಅನೇಕ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಮಾತನಾಡಲೂ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಾಟಕದ ಸಂಭಾಷಣೆ ಕಲಿಸಿ ಅತ್ಯುತ್ತಮವಾಗಿ ನಾಟಕ ಪ್ರದರ್ಶಿಸಿದ ಕಾಲೇಜು ಆಡಳಿತ ಮಂಡಳಿ ಪ್ರಯತ್ನವನ್ನು ಶ್ಲಾಘನೀಯ ಎಂದರು.
ಬೆಂಗಳೂರು ಪೂರ್ವ ತಾಲೂಕಿನ ತಾಪಂ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್ ಮಾತನಾಡಿ, ರಂಗಭೂಮಿಯಲ್ಲಿ ಭಾಗವಹಿಸುವುದರಿಂದ ಆತ್ಮಸ್ಥೈರ್ಯ ಮತ್ತು ನಾಯಕತ್ವದ ಗುಣಗಳು ಬೆಳೆಯುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು ಎಂದರು.
ವೇದಿಕೆ ಅಧ್ಯಕ್ಷ ಪಾಪಣ್ಣ ಮಾತನಾಡಿದರು. ಕಾಲೇಜು ನಾಟಕೋತ್ಸವದ ಸಂಚಾಲಕ ಪ್ರವೀಣ್ ಹಾಲ್ ಮತ್ತೂರ್, ಜಿಲ್ಲಾ ಸಂಚಾಲಕಿ ದಾಕ್ಷಾಯಣಿ ಭಟ್, ಜನಪದರು ವೇದಿಕೆ ಸಂಚಾಲಕ ಜಗದೀಶ್ ಕೆಂಗನಾಳ್, ಕಾರ್ಯದರ್ಶಿ ಸಿದ್ದೇಶ್ ದೊಡ್ಡಬನಹಳ್ಳಿ ಇತರರಿದ್ದರು.