ಚಿಕ್ಕಬಳ್ಳಾಪುರ : ಸಮಾಜದಲ್ಲಿ ಪ್ರತಿಭಾವಂತರನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಎ.ಎನ್.ರಘುನಂದನ್ ಸಲಹೆ ನೀಡಿದರು.
ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಸಿಂಧೂರ ನೃತ್ಯ ಕಲಾ ಅಕಾಡೆಮಿ ಸೋಮವಾರ ಆಯೋಜಿಸಿದ್ದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಭೆಯು ಯಾರೊಬ್ಬರ ಸ್ವತ್ತಲ್ಲ. ಎಲ್ಲರಲ್ಲೂ ಅಡಗಿರುತ್ತದೆ. ಆದರೆ, ಅದನ್ನು ಸಕಾಲದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಚ್ಚಿಗೆ ಕೈಗೊಳ್ಳಬೇಕು. ಪ್ರತಿಭಾವಂತರಿಗೆ ಪ್ರತಿಭೆ ನಿರೂಪಿಸಲು ಒಳ್ಳೆಯ ಅವಕಾಶ ನೀಡಬೇಕು ಎಂದರು. ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗೂ ಸಮಾನ ಆದ್ಯತೆ ನೀಡಬೇಕು. ಕ್ರೀಡೆಗಳಲ್ಲೂ ಭಾಗವಹಿಸಬೇಕು. ವಿವಿಧ ಕಲೆಗಳನ್ನು ಕರಗತ ಮಾಡಿಕೊಂಡು, ಉತ್ತಮ ಸಾಧನೆ ತೋರಿ ಸಮಾಜದ ಗೌರವಕ್ಕೆ ಪಾತ್ರರಾಗಬೇಕು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷ ಆನಂದ್ ರೆಡ್ಡಿ ಬಾಬು ಮಾತನಾಡಿ, ಕ್ರೀಡೆ, ನೃತ್ಯ, ಗಾಯನ, ನಟನೆ ಸೇರಿ ಆಸಕ್ತಿಕರ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದು ಉನ್ನತ ಸ್ಥಾನಕ್ಕೇರಲು ಸಹಕಾರಿಯಾಗುತ್ತದೆ. ಇತ್ತೀಚೆಗೆ ಮಕ್ಕಳು ಅನಪೇಕ್ಷಿತ ಚಟುವಟಿಕೆಯ ಕಡೆಗೆ ಆಕರ್ಷಿತರಾಗಿ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಫೇಸ್‌ಬುಕ್, ವಾಟ್ಸ್ ಆ್ಯಪ್ ಸೇರಿ ಆನ್‌ಲೈನ್ ಸ್ಪರ್ಧೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದು ದೈಹಿಕ ಕಸರತ್ತಿನ ಆಟದಿಂದ ದೂರ ಉಳಿಯುತ್ತಿದ್ದಾರೆ. ಹಾಗೆಯೇ ಪಾಲಕರು ದೇಶೀಯ ಕಲೆಗಳ ಮಹತ್ವವನ್ನು ಮಕ್ಕಳಿಗೆ ತಿಳಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂತಹ ಭಾವನೆ ದೂರವಾಗಬೇಕು ಎಂದು ಹೇಳಿದರು.