ತಿ.ನರಸೀಪುರ: ಗ್ರಾಮೀಣ ಪ್ರದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ನೆರವು ನೀಡಿ, ಸಾಧನೆಗೆ ಉತ್ತೇಜನ ನೀಡಲು ಆರ್ಥಿಕವಾಗಿ ಸಹಕಾರ ನೀಡುತ್ತಿರುವ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯ ಶ್ಲಾಘನೀಯ ಎಂದು ಶ್ರೀ ಕ್ಷೇತ್ರ ರಾಜ ಬೊಪ್ಪೆಗೌಡನಪುರದ ಮಠದ ಆಡಳಿತಾಧಿಕಾರಿ ಬಿ.ಪಿ.ಭರತ್ ರಾಜೇ ಅರಸ್ ಹೇಳಿದರು.
ತಾಲೂಕಿನ ಯಡದೊರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶ್ರೀ ಮಹರ್ಷಿ ವಾಲ್ಮೀಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದ ಅವರು, ಪ್ರಸ್ತುತ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕ, ಕ್ರೀಡೆ, ಔದ್ಯೋಗಿಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಮಕ್ಕಳು ಬಡತನದ ನಡುವೆಯೂ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಬಡತನದಲ್ಲಿರುವ ಪ್ರತಿಭಾನ್ವಿತ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣ ಮತ್ತು ಕ್ರೀಡಾ ಪ್ರತಿಭೆಗೆ ಉತ್ತೇಜನ ನೀಡುತ್ತಿರುವ ಟ್ರಸ್ಟ್‌ನ ಸಮಾಜಮುಖಿ ಕೆಲಸ ಅವಿಸ್ಮರಣೀಯ. ಇಂತಹ ನೆರವು ಪಡೆಯುವ ಮಕ್ಕಳು ಶೈಕ್ಷಣಿಕ ಪ್ರಗತಿ ಸಾಧಿಸಲು ಸಹಕಾರಿಯಾಗುತ್ತಿದೆ ಎಂದರು.
ವಾಲ್ಮೀಕಿ ನಾಯಕ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷ ತಾಯೂರು ಪ್ರಕಾಶ್ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರರು ಎಂದೇ ಪ್ರಖ್ಯಾತರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಮಾಜಮುಖಿ ಕಾರ್ಯ ಚಿರಸ್ಥಾಯಿ. ಅವರು ಶೈಕ್ಷಣಿಕ, ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಗಳು ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿವೆ. ಇವರ ಅಧಿಕಾರ ಅವಧಿಯನ್ನು ಮೈಸೂರು ಸಂಸ್ಥಾನದ ಸುವರ್ಣ ಯುಗ ಎಂದು ಬಣ್ಣಿಸಲಾಗಿತ್ತು ಎಂದು ತಿಳಿಸಿದರು.
ಇದೇ ವೇಳೆ ಎಸ್.ಎ.ಚೌಧರಿ ಮಕ್ಕಳಿಗೆ ಕ್ರೀಡಾ ಸಾಮಗ್ರಿ, ಸಮವಸ್ತ್ರ ವಿತರಿಸಿದರು. ಶಿಕ್ಷಕಿ ಎಂ.ಎಸ್. ಪವಿತ್ರಾ, ಪ್ರಾಧ್ಯಾಪಕ ಡಾ.ವೈ.ಡಿ.ರಂಗನಾಥ್, ಮಹರ್ಷಿ ವಾಲ್ಮೀಕಿ ಸಂಸ್ಥಾನ ಮಠದ ಸಂಸ್ಥಾಪಕ ಟ್ರಸ್ಟಿ ಎಚ್.ಸಿ.ಲೋಕೇಶ್ ನಾಯಕ, ತಾಲೂಕು ನಾಯಕರ ಸಂಘದ ಅಧ್ಯಕ್ಷ ಚಿಕ್ಕಯ್ಯ, ನಿವೃತ್ತ ಲೆಕ್ಕಾಧಿಕಾರಿ ಎಂ.ಜೆ.ಶಿವಸ್ವಾಮಿ, ಟ್ರಸ್ಟ್ ಅಧ್ಯಕ್ಷ ಯಡದೊರೆ ಮಹೇಶ್ ನಾಯಕ, ಸಾಮಾಜಿಕ ಕಾರ್ಯಕರ್ತೆ ಮಹಾಲಕ್ಷ್ಮೀ, ಗ್ರಾಪಂ ಸದಸ್ಯರಾದ ನಿರಂಜನ್, ಮಹೇಶ್, ಮಹೇಶ್ ಕುಮಾರ್, ದೇವರಾಜು, ಮುಖಂಡರಾದ ಸುಬ್ಬನಾಯಕ, ರಮ್ಮನಹಳ್ಳಿ ಗೋಪಾಲ್, ದೈಹಿಕ ಶಿಕ್ಷಣ ಶಿಕ್ಷಕ ಜಯಪ್ಪ ಇದ್ದರು.