ಮೈಸೂರು: ಜ್ಞಾನಾಧಾರಿತ ಯುಗದಲ್ಲಿ ಶ್ರೀಮಂತ, ಬಡವ ಎನ್ನುವ ತಾರತಮ್ಯವಿಲ್ಲದೆ ಕೌಶಲ ಹಾಗೂ ಪ್ರತಿಭೆಗೆ ಅವಕಾಶ ಇದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಜ್ಞಾನಬುತ್ತಿ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎಸ್‌ಡಿಎ, ಎಫ್‌ಡಿಎ ಮತ್ತು ಪೊಲೀಸ್ ಕಾನ್‌ಸ್ಟೇಬಲ್ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೆ ರಾಜಕಾರಣಿಗಳು, ಆಧಿಕಾರಿಗಳ ಶಿಫಾರಸು ಇಲ್ಲವೆ ಹಣದ ಪ್ರಭಾವದಿಂದ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿದ್ದರು. ಇದರಿಂದ ಪ್ರತಿಭಾವಂತರು ಉದ್ಯೋಗ ಅವಕಾಶ ವಂಚಿತರಾಗಬೇಕಾಗಿತ್ತು. ಆದರೆ, ಈಗ ಜ್ಞಾನಾಧಾರಿತ ಪ್ರಪಂಚದಲ್ಲಿ ಯಾವುದೇ ರಾಜಕೀಯ ಪ್ರಭಾವ, ಹಣ, ಅಂತಸ್ತಿನ ಹಿನ್ನೆಲೆಯಿಲ್ಲದ ಬಡ, ಗ್ರಾಮೀಣ, ಹಿಂದುಳಿದ ಪ್ರದೇಶಗಳ ಯುವಜನರು ದೊಡ್ಡ ಸಾಧನೆ ಮಾಡಿ ಎತ್ತರದ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು.
ಪ್ರತಿಭಾನ್ವಿತರ ಮನೆ ಬಾಗಿಲಿಗೆ ಅವಕಾಶಗಳು ಬಂದು ನಿಂತಿವೆ. ಹಾಗಾಗಿ ಯಾರ ಮರ್ಜಿಗೂ ಒಳಗಾಗದೆ ಕಠಿಣ ಪರಿಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕ ಡಾ.ಬಿ.ಸಿ.ಸತೀಶ್ ಮಾತನಾಡಿ, ಅವಕಾಶಗಳು ಬಾಗಿಲು ಪದೇ ಪದೆ ತೆರೆಯುವುದಿಲ್ಲ. ಜೀವನದಲ್ಲಿ ಬಂದ ಅವಕಾಶಗಳಿಗೆ ಬೆನ್ನು ತೋರದೆ ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು. ಬೇರೆಯವರೊಂದಿಗೆ ಹೋಲಿಕೆಯನ್ನು ಎಂದಿಗೂ ಮಾಡಿಕೊಳ್ಳಬೇಡಿ. ನಿಮ್ಮ ಬಗ್ಗೆ ನಿಮಗೆ ವಿಶ್ವಾಸ ಇರಲಿ ಎಂದರು.
ಅಧ್ಯಯನ ಪುಸ್ತಕವನ್ನು ಬಿಡುಗಡೆ ಮಾಡಿದ ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ವಿ.ಆರ್.ಶೈಲಜಾ ಮಾತನಾಡಿ, ಮನಸ್ಸು ಮಾಡಿದರೆ ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ. ಅದೃಷ್ಟದ ಮೇಲೆ ನಂಬಿಕೆಯಿಡದೆ ನಿಮ್ಮ ಸ್ವಂತ ಪರಿಶ್ರಮದ ಮೇಲೆ ನಂಬಿಕೆಯಿಟ್ಟರೆ ಸಾಧನೆ ಸುಲಭ ಎಂದರು.
ನಾನು ಕೂಡ ನಿಮ್ಮ ಹಾಗೆ ಒಂದು ಕಾಲದಲ್ಲಿ ಜ್ಞಾನಬುತ್ತಿ ಸಂಸ್ಥೆಯ ವಿದ್ಯಾರ್ಥಿನಿಯಾಗಿ ಬಂದು ಈ ಮಟ್ಟಕ್ಕೆ ಸಾಧನೆ ಮಾಡಿದ್ದು ಸಂಸ್ಥೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ.ಈ.ಶಿವಪ್ರಸಾದ್, ಪ್ರೊ.ವಿ.ಜಯಪ್ರಕಾಶ್, ಡಾ.ಉಮೇಶ್ ಬೇವಿನಹಳ್ಳಿ, ಹೇಮಚಂದ್ರ, ಎಸ್. ಗಣೇಶ, ರೋಹನ್ ರವಿಕುಮಾರ್, ಯು.ಎಂ. ಶರದ್ ರಾವ್, ಕೆ.ವಿಜಯ್ ಕುಮಾರ್, ಎಚ್.ಎಂ.ಸ್ಫೂರ್ತಿ ರಾಜ್, ಕೆ.ವೈ. ನಾಗೇಂದ್ರ, ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ, ಕಾರ್ಯದರ್ಶಿ ಎಚ್.ಬಾಲಕೃಷ್ಣ, ಪ್ರೊ.ಕೃ.ಪ.ಗಣೇಶ ಇದ್ದರು.