ಕಲಬುರಗಿ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಿಂದ ಜ.೨೧ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಉದ್ದೇಶದೊಂದಿಗೆ ಇಡೀ ರಾಷ್ಟ್ರಾದ್ಯಂತ ಪ್ರತಿಭಾ ಪುರಸ್ಕಾರ ಹಮ್ಮಿಕೊಂಡಿದ್ದು, ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ೨೦೨೨-೨೩ನೇ ಸಾಲಿನ ಪುರಸ್ಕಾರ ಕಾರ್ಯಕ್ರಮ ಜ.21ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕವಲ್ಲದೆ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿ ದೇಶದ ವಿವಿಧ ರಾಜ್ಯಗಳಲ್ಲೂ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಎರಡು ಸಾವಿರ ರೂ.ನಂತೆ ಪ್ರತಿ ವರ್ಷ ಮಹಾಸಭಾದಿಂದ ಎರಡು ಕೋಟಿ ರೂ.ಗಿಂತ ಹೆಚ್ಚು ಪುರಸ್ಕಾರ ಧನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ನವೆಂಬರ್‌ನಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಅನಿವಾರ್ಯ ಕಾರಣದಿಂದ ಮುಂದೂಡಿದ್ದು, ಪ್ರಸಕ್ತ ವರ್ಷ ಜಿಲ್ಲೆಯ ೮೭ ದ್ವಿತೀಯ ಪಿಯುಸಿ, ೧೦೮ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಸಮಾರಂಭಕ್ಕೆ ಸಮಾಜದ ವಿವಿಧ ಮಠಾಧೀಶರು, ಸಚಿವರು, ಶಾಸಕರು, ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪುರಸ್ಕಾರದ ಸ್ವಾಗತ ಸಮಿತಿ ಅಧ್ಯಕ್ಷ ರಾಜುಗೌಡ ನಾಗನಳ್ಳಿ, ಮಹಾಸಭಾದ ಪದಾಧಿಕಾರಿಗಳಾದ ಸಿದ್ದುಗೌಡ ಅಫಜಲಪುರಕರ್, ಸೋಮಶೇಖರ ಹಿರೇಮಠ, ಚೆನ್ನಪ್ಪ ದಿಗ್ಗಾವಿ, ಭೀಮಾಶಂಕರ ಮೀಟೇಕರ್, ಜ್ಯೋತಿ ಮರಗೋಳ ಇದ್ದರು.