ಹಿರೀಸಾವೆ ಹೋಬಳಿ ದಿಡಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.  
ಜಿಲ್ಲೆ

ಪ್ರತಿಭಾ ಕಾರಂಜಿಯಿಂದ ಮಕ್ಕಳ ಪ್ರತಿಭೆ ಅನಾವರಣ

ಹಿರೀಸಾವೆ: ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಒಂದು ಉತ್ತಮ ವೇದಿಕೆಯಾಗಿದೆ ಎಂದು ದಿಡಗ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್.ಪ್ರಕಾಶ್ ಹೇಳಿದರು.

ಹೋಬಳಿಯ ದಿಡಗ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ಸದ್ಬಳಕೆ ಮಾಡಿಕೊಂಡು ಬಾನೆತ್ತರಕ್ಕೆ ಬೆಳೆಯಬೇಕು ಎಂದರು.

ತನ್ನೊಳಗಿರುವ ಕಲೆ, ಸಾಹಿತ್ಯ, ವಾಕ್ ಚಾತುರ್ಯ ಹಾಗೂ ಅಪಾರ ಜ್ಞಾನ ಸೇರಿದಂತೆ ವಿವಿಧ ಪ್ರತಿಭೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ಒಳ್ಳೆಯ ಅವಕಾಶ ಕಲ್ಪಿಸಿಕೊಡಲಿದೆ. ಹಳ್ಳಿಯಿಂದ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತಾವು ಸುಲಭವಾಗಿ ಗುರುತಿಸಿಕೊಳ್ಳಬಹುದು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಎಚ್.ಕೆ.ಸುಧಾಕರ್ ಮಾತನಾಡಿ, ಗ್ರಾಮೀಣ ಮಕ್ಕಳು ಮನಸು ಮಾಡಿದರೆ ಭೂಮಿಯ ಮೇಲಲ್ಲ. ಅನ್ಯಗ್ರಹಗಳ ಮೇಲೂ ದೇಶದ ಬಾವುಟ ಹಾರಿಸಬಹುದು ಎಂಬುದಕ್ಕೆ ಯಶಸ್ವಿಯೊಂದಿಗೆ ಸಾಬೀತು ಪಡಿಸಿದ ಚಂದ್ರಯಾನ-3 ರ ತಂಡ ಸಾಕ್ಷಿಯಾಗಿದೆ. ಅದರಲ್ಲಿ ಅದೆಷ್ಟೋ ವಿಜ್ಞಾನಿಗಳು ಹಳ್ಳಿಯ ಪ್ರತಿಭೆಗಳು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಪ್ರತಿಭಾ ಕಾರಂಜಿಯಲ್ಲಿ ಕ್ಲಸ್ಟರ್ ವ್ಯಾಪ್ತಿಯ 10 ಶಾಲೆಗಳಿಂದ ಒಟ್ಟು 90 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಕಂಠಪಾಠ, ಮಿಮಿಕ್ರಿ, ಕಥೆ ಹೇಳುವುದು, ಕ್ಲೇ ಮಾಡೆಲಿಂಗ್, ಚಿತ್ರಕಲೆ, ಆಶು ಭಾಷಣ, ಅಭಿನಯ ಗೀತೆ ಹಾಗೂ ಛಧ್ಮವೇಷ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.

ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ನೀಲಿಸಿದ್ದು ಮಾತನಾಡಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಪಿ.ಕೆ.ಶಿವಶಂಕರ್, ಎಚ್.ಕೆ.ಸುಧಾಕರ್, ರವಿ, ಆನಂದ್, ಸೌಮ್ಯಾ ಗವೀಶ್, ಗೀತಾ, ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್, ಎಲ್ಲ ಶಾಲೆಗಳ ಮುಖ್ಯಶಿಕ್ಷಕರು, ಸಹಶಿಕ್ಷಕರು ಹಾಗೂ ಪಾಲಕರು ಪಾಲ್ಗೊಂಡಿದ್ದರು.