ಮೈಸೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನವರಿ 5 ರಿಂದ ಪ್ರತಿಪಕ್ಷಗಳ 224 ಕ್ಷೇತ್ರಗಳ ಅಭ್ಯರ್ಥಿಗಳ ಮೇಲೆ ಐಟಿ, ಇಡಿ ದಾಳಿ ನಡೆಸಲು ಸಿದ್ಧತೆ ನಡೆಯುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ 17 ಬಾರಿ ದಾಳಿ ನಡೆದಿದೆ. 37 ಬಾರಿ ಸಮನ್ಸ್ ನೀಡಿದ್ದಾರೆ. 2014 ರಿಂದ 2022 ರವರೆಗೆ 124 ರಾಜಕೀಯ ಪ್ರಮುಖರ ಮೇಲೆ ಐಟಿ, ಇಡಿ ದಾಳಿಯಾಗಿದೆ. ಶೇ.96 ರಷ್ಟು ಪ್ರತಿಪಕ್ಷಗಳ ನಾಯಕರ ಮೇಲೆ ದಾಳಿ ನಡೆದಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ 21 ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ಧತೆ ನಡೆಯುತ್ತಿದ್ದು, ಇದರಲ್ಲಿ 8 ರಿಂದ 9 ಶಾಸಕರು ಸಹ ಇದ್ದಾರೆ. ರಾಜ್ಯಕ್ಕೆ 300 ಐಟಿ ಅಧಿಕಾರಿಗಳು ಅಕ್ಕ ಪಕ್ಕದ ರಾಜ್ಯದಿಂದ ಬಂದಿದ್ದಾರೆ. ನಮ್ಮ ಅಭ್ಯರ್ಥಿಗಳ ಚಲನವಲನವನ್ನು ಗಮನಿಸುತ್ತಿದ್ದಾರೆ. ಅದೇ ರೀತಿ 1200 ಆರ್‌ಎಸ್‌ಎಸ್ ಕಾರ್ಯಕರ್ತರು ಬಂದಿದ್ದಾರೆ. ಇವರಿಗೆ ಬಿಜೆಪಿ ಸೇರ್ಪಡೆಗೆ ಆಫರ್ ಬರಲಿದ್ದು, ಸ್ಪಂದಿಸದೆ ಇದ್ದರೆ ಐಟಿ, ಇಡಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದರು.
ಈ ಬಾರಿ ಕಾಂಗ್ರೆಸ್ ಪಕ್ಷದವರ ಮೇಲೆ ಐಟಿ, ಇಡಿ ದಾಳಿ ನಡೆಸಿ ್ನ ಜೈಲಿನಲ್ಲಿನಟ್ಟರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಒಕ್ಕಲಿಗ ಸಮುದಾಯಕ್ಕೆ ಸ್ವಾಭಿಮಾನ ಇದ್ದರೆ ನಿಮ್ಮ ಸಮುದಾಯದ ನಾಯಕ ಡಿ.ಕೆ. ಶಿವಕುಮಾರ್‌ಗೆ ಆಗುತ್ತಿರುವ ಕಿರುಕುಳದ ವಿರುದ್ದ ಧ್ವನಿ ಎತ್ತಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸಹ ಇಡಿಯ ಗನ್ ಪಾಯಿಂಟ್‌ನಲ್ಲಿ ಇಟ್ಟು ಯಡಿಯೂರಪ್ಪ ಕುಟುಂಬಕ್ಕೆ ಬಿಜೆಪಿ ಕಿರುಕುಳ ನೀಡುತ್ತಿದೆ. ಲಿಂಗಾಯತ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಪುತ್ರ ಕೆಂಪಲ್ ಎಂಟರ್ಪ್ರೈಸಸ್ ನಡೆಸುತ್ತಾರೆ. ಅದರ ವಹಿವಾಟು ವರ್ಷಕ್ಕೆ 6300 ಕೋಟಿ ರೂ., ಈಗ 13,000 ಕೋಟಿ ರೂ. ಆಗಿದೆ. ಆದರೆ, ಅವರ ಮೇಲೆ ಐಟಿ ರೇಡ್ ನಡೆಯುತ್ತಿಲ್ಲ. ಹುಣಸೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಶ್ವನಾಥ್ ಚುನಾವಣೆ ಸಂದರ್ಭ ಬಿಜೆಪಿ ಪಕ್ಷದಿಂದ 15 ಕೋಟಿ ರೂ. ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಆರೋಪಿಸಿದ್ದಾರೆ. ಇದನ್ನು ಸಿಬಿಐಗೆ ಯಾಕೆ ತನಿಖೆಗೆ ವಹಿಸುತ್ತಿಲ್ಲ? ಬಿಜೆಪಿಯಲ್ಲಿ ಸಿಎಂ ಆಗಲು 2500 ಕೋಟಿ ರೂ. ನೀಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಈ ಬಗ್ಗೆ ಏತಕ್ಕೆ ತನಿಖೆ, ದಾಳಿಗಳು ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.