ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ 
ಜಿಲ್ಲೆ

ಪ್ರತಿಜೀವಿಗೂ ಬದುಕುವ ಹಕ್ಕಿದೆ

ಚಿಕ್ಕಮಗಳೂರು: ಭಾರತ ಸಂವಿಧಾನ ರೂಪಿಸಿರುವ ಸೃಷ್ಟಿಯ ಪ್ರತಿ ಜೀವಿಗೂ ಬದುಕುವ ಹಕ್ಕಿದೆ ಎಂಬ ಘೋಷಣೆ ಮತಬ್ಯಾಂಕ್ ರಾಜಕೀಯದ ಹೀನ ರಾಜಕಾರಣಿಗಳ ಎದುರು ಮಂಕಾಗಿ ಕುಳಿತಿದೆ ಎಂದು ಶ್ರೀ ಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ರಕ್ಷಕರಾದ ಆರಕ್ಷಕ ಇಲಾಖೆ, ಆಳುವ ಪ್ರಭುಗಳ ಮತ್ತು ಗೋಮಾಂಸ ಮಾಫಿಯಗಳ ಕೈಗೊಂಬೆಯಾಗಿದೆ. ಪಶುಗಳನ್ನು ರಕ್ಷಿಸುವ ಹೊಣೆ ಹೊತ್ತ ಪಶು ಇಲಾಖೆ ಅಸಹಾಯಕವಾಗಿ ಕಟುಕರಿಗೆ ಕಾನೂನಿನಡಿ ವಿನಾಯಿತಿ ನೀಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ೩೫೦ ಕ್ಕೂ ಹೆಚ್ಚು ಖಾಸಗಿ, ಸರ್ಕಾರಿ ಗೋಶಾಲೆಗಳಿದ್ದು, ಖಾಸಗಿ ಗೋಶಾಲೆಗಳಲ್ಲಿ ೫೦ ಸಾವಿರಕ್ಕೂ ಹೆಚ್ಚು ಗೋವುಗಳನ್ನು ಸಂರಕ್ಷಿಸಲಾಗುತ್ತಿದೆ. ೨,೦೨೦ ಕೋಟಿ ಹಣ ಕೊಡಬೇಕಾದ ಖಾಸಗಿ ಗೋಶಾಲೆಗಳ ಹಣವನ್ನು ಅನ್ಯ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಟೀಕಿಸಿದರು.

ಇತ್ತೀಚೆಗೆ ಅಲ್ಪಸಂಖ್ಯಾತ ಕಾಲನಿಗಳ ಅಭಿವೃದ್ಧಿಯ ಹೆಸರಲ್ಲಿ ಮತ ತುಷ್ಟೀಕರಣದ ಭಾಗವಾಗಿ ೩೯೩ ಕೋಟಿ ರೂ. ಗಳನ್ನು ಬಿಡುಗಡೆ ಮಾಡಿರುವ ಸರ್ಕಾರ ಸೆಪ್ಟೆಂಬರ್ ಅರ್ಧವಾರ್ಷಿಕ ಕಳೆದರೂ ಜಿಲ್ಲೆಯ ಗೋಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳಿದರು.

ಜಿಲ್ಲಾ ಆರಕ್ಷಕರು ಗೋಮಾಫಿಯಾಗಳಿಗೆ ರಕ್ಷಣೆ ಕೊಡುತ್ತಿದ್ದಾರೆ. ಇವರ ಕೈಗಳನ್ನು ಕಟ್ಟಿಹಾಕುತ್ತಿರುವವರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಸರ್ಕಾರದ ಈ ಬಹಿರಂಗ ನಡೆಯಿಂದಾಗಿ ಗೋವುಗಳ ನಾಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ದೂರಿದರು.

ಈ ಬಗ್ಗೆ ಪ್ರಶ್ನಿಸಬೇಕಾದ ಗೋವು ಸಂರಕ್ಷಕ ನಾಟಕದ ಬಿಜೆಪಿ ಕಂಪನಿ, ಸಂಘ ಪರಿವಾರದ ತಳ ಸಮುದಾಯಗಳು ಯುವಕರಿಗೆ ಧರ್ಮದ ಮತ್ತೇರಿಸಿ ಅವರನ್ನು ಪೊಲೀಸರು ಮತ್ತು ಗೋಮಾಂಸ ಮಾಫಿಯಾಗಳಿಗೆ ಅವರ ಬೆಂಗಾವಲಿನ ರಾಜಕಾರಣಿಗಳ ಕೈಗೊಪ್ಪಿಸಿ ತಾನುಮಾತ್ರ ವೀರೇಂದ್ರ ಹೆಗ್ಗಡೆಯವರನ್ನು ರಕ್ಷಿಸಲು ಆಳವಾದ ಕ್ರಿಯಾಯೋಜನೆ ತೊಡಗಿಸಿಕೊಂಡಿದೆ ಎಂದರು.

ಅಸ್ಸಾA ಹೆಸರಿನ ರೋಹಿಂಗ್ಯಾಗಳು ಕಾರ್ಮಿಕರಿಗೆ ಎಸ್ಟೇಟ್ ಮಾಲಿಕರುಗಳು ಫ್ರೀ ಲೈಸನ್ಸ್ ನೀಡಿ ತಮ್ಮ ತೋಟದ ಒಳಗಿರುವ ದನ-ಕರುಗಳನ್ನು ಕೊಂದು ಮಾಂಸ ಮಾಡಲು ಸಹಕರಿಸುತ್ತಿದ್ದಾರೆ ಎಂದು ಹೇಳಿದರು.

ಕೂಡಲೇ ಕಾಫಿ, ಟೀ ಎಸ್ಟೇಟ್‌ಗಳಲ್ಲಿ ಕಾರ್ಮಿಕರಾಗಿ ನೇಮಿಸಿರುವ ರೋಹಿಂಗ್ಯಾಗಳು ಮತ್ತು ಗೋಹತ್ಯೆ ಪ್ರಕರಣದಲ್ಲಿ ಎಸ್ಟೇಟ್ ಮಾಲಿಕರನ್ನು ಆರೋಪಿ-೧ ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.