ಬಾಗಲಕೋಟೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ವಿರೋಧಿಸಿ ಸೋಮವಾರ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಯಾರೋ ಒಬ್ಬಿಬ್ಬರು ಮಾಡಿದ ಎಡವಟ್ಟಿನಿಂದಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಕಾರ್ಯಕರ್ತರಿಗೆ ಬೆಂಕಿ ತಗುಲಿ ಸುಟ್ಟ ಗಾಯಗಳಾಗಿವೆ.
ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಪ್ರತಿಭಟನಾಕಾರರು ಗುಂಪಾಗಿ ಸೇರಿ ಟೈಯರ್ ಮೇಲೆ ರಾಜ್ಯಪಾಲರ ಪ್ರತಿಕೃತಿ ದಹಿಸುವ ವೇಳೆ ಬೆಂಕಿಕಡ್ಡಿ ಗೀರುತ್ತಿದ್ದಂತೆ ಯಾರೋ ಒಬ್ಬ ಪೆಟ್ರೋಲ್ ಎರೆಚಿಬಿಟ್ಟ ಇದರಿಂದ ಜ್ವಾಲೆ ಪ್ರಜ್ವಲಿಸಿದ್ದರಿಂದ ಹತ್ತಾರು ಜನರು ಗಾಬರಿ ಬಿದ್ದು ಕಾಲ್ಕಿತ್ತರು. ಈ ವೇಳೆ ಇಬ್ಬರಿಗೆ ಬೆಂಕಿ ತಗುಲಿದ್ದು, ಒಬ್ಬರಿಗೆ ಮುಖ, ಎದೆಭಾಗ ಹಾಗೂ ಭುಜಕ್ಕೆ ಸುಟ್ಟ ಗಾಯಗಳಾಗಿದ್ದರೆ ಮತ್ತೊಬ್ಬರಿಗೆ ಕೈ-ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಬೆಂಕಿ ನಂದಿಸಿ ಅವರಿಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಯಿತು.
ಬೆಂಕಿ ತಗುಲಿ ಗಾಯಗೊಂಡವರನ್ನು ಬಾದಾಮಿ ತಾಲೂಕಿನ ನಾಗರಾಳ ಎಸ್ಪಿ ಗ್ರಾಮದ ದ್ಯಾವಪ್ಪ ಮಾಗಿ ಹಾಗೂ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದ ಹನಮಂತ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಯಾವುದೇ ಅಪಾಯ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಗಾಯಾಳುಗಳ ಭೇಟಿ ಮಾಡಿ ಸಚಿವ, ಶಾಸಕರು : ಬೆಂಕಿ ತಗುಲಿ ಇಬ್ಬರು ಗಾಯಗೊಂಡ ಹಿನ್ನಲೆಯಲ್ಲಿ ಪ್ರತಿಭಟನಾ ಸಭೆ ಮುಗಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ ಅವರು ಜಿಲ್ಲಾ ಆಸ್ಪತ್ರೆಗೆ ತೆರಳಿ ಇಬ್ಬರು ಗಾಯಾಳುಗಳ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು. ಇಬ್ಬರಿಗೂ ವೈಯಕ್ತಿಕವಾಗಿ ಹಣಕಾಸು ನೆರವು ನೀಡಿದರು. ಈ ವೇಳೆ ೨೦೨೪ರ ಲೋಕಸಭೆ ಚುನಾವಣೆ ಪರಾಭವ ಅಭ್ಯರ್ಥಿ ಸಂಯುಕ್ತ ಪಾಟೀಲ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಜಿಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ ಮತ್ತಿತರರು ಇದ್ದರು.