ಜಿಲ್ಲೆ

ಪ್ರತಿಕೂಲ ಪರಿಸ್ಥಿತಿ ಹೊಸ ಅವಕಾಶ

Dharwad

ಹುಬ್ಬಳ್ಳಿ: ಕೋವಿಡ್ ನಂತರದ ದಿನಗಳು ಸವಾಲಿನದಾಗಿದ್ದು, ಇಂಥ ಪ್ರತಿಕೂಲ ಪರಿಸ್ಥಿತಿಯನ್ನು ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು (ಎಂಎಸ್​ಎಂಇ) ಹೊಸ ಅವಕಾಶವಾಗಿದೆಯೆಂದು ಭಾವಿಸಬೇಕು ಎಂದು ಕೇಂದ್ರ ಕಲ್ಲಿದ್ದಲು, ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ಹಾಗೂ ಚೇತನ ಬಿಸಿನೆಸ್ ಸ್ಕೂಲ್ ಮಂಗಳವಾರ ಹಮ್ಮಿಕೊಂಡಿದ್ದ ‘ಕೋವಿಡ್ ನಂತರ ಭಾರತದಲ್ಲಿ ಎಂಎಸ್​ಎಂಇ ಎದುರಿಸುತ್ತಿರುವ ಸವಾಲುಗಳು ಮತ್ತು ಅವಕಾಶಗಳು’ ಎಂಬ ವಿಷಯದ ಕುರಿತ ವೆಬಿನಾರ್ ಕಾರ್ಯಕ್ರಮದಲ್ಲಿ ಅವರ ಮುದ್ರಿತ ಸಂದೇಶವನ್ನು ಪ್ರಸಾರ ಮಾಡಲಾಯಿತು.

ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ)ಯಲ್ಲಿ ಶೇ. 30ರಷ್ಟು ಹಾಗೂ ಒಟ್ಟು ರಫ್ತಿನಲ್ಲಿ ಶೇ. 50ರಷ್ಟು ಎಂಎಸ್​ಎಂಇ ಪಾಲು ಇದೆ. 15 ಕೋಟಿ ಜನರಿಗೆ ಉದ್ಯೋಗ ಒದಗಿಸಿದೆ. ಎಂಎಸ್​ಎಂಇಗಳು ದೇಶದ ಆರ್ಥಿಕ ಪ್ರಗತಿಯ ವಾಹಕಗಳು. ಕರೊನಾದಿಂದ ಆರ್ಥಿಕ ಕುಸಿತ ಉಂಟಾಗಿದೆ. ಇಂಥ ಹಿನ್ನೆಡೆ ಹಿಂದೆಂದೂ ಆಗಿರಲಿಲ್ಲ. ಇದರಿಂದ ಬಂಡವಾಳ ಹಾಗೂ ಬೇಡಿಕೆ ಕೊರತೆಯನ್ನು ಎದುರಿಸುತ್ತಿರುವ ಎಂಎಸ್​ಎಂಇಗಳ ಎದುರು ಕಠಿಣ ಸವಾಲು ಇದೆ ಎಂದರು.

ವೆಬಿನಾರ್​ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಮುದ್ರಿತ ಸಂದೇಶವನ್ನು ಪ್ರಸಾರ ಮಾಡಲಾಯಿತು. ಆತ್ಮನಿರ್ಭರ ಪ್ಯಾಕೇಜ್​ನಲ್ಲಿ ಕೇಂದ್ರ ಸರ್ಕಾರ ಎಂಎಸ್​ಎಂಇ ಗಳಿಗೆ 3 ಲಕ್ಷ ಕೋಟಿ ರೂ. ಹಣಕಾಸು ನೆರವು ನೀಡಲಿದೆ. ಬ್ಯಾಂಕ್​ಗಳು ಸಾಲ ವಿತರಣೆ ಮಾಡಲಿವೆ. ಹಿಂದೆಂದಿಗಿಂತ ಕಡಿಮೆ ಬಡ್ಡಿ ದರ ಆಕರಣೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಆನ್​ಲೈನ್ ಮೂಲಕ ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದ ಐಐಎಂ (ಅಹಮದಾಬಾದ್) ನಿವೃತ್ತ ಪ್ರಾಧ್ಯಾಪಕ ಡಾ. ಮುಕುಂದ ದೀಕ್ಷಿತ್, ಕೋವಿಡ್ ನಂತರ ಹೊಸದಾದ ಜಗತ್ತಿಗೆ ನಾವು ಕಾಲಿರಿಸಿದ್ದೇವೆ. ಇಂಥ ಅಗ್ನಿಪರೀಕ್ಷೆಯ ಕಾಲಘಟ್ಟದಲ್ಲಿ ಎದುರಾಗುವ ಅವಕಾಶಗಳು ಹಾಗೂ ಅಪಾಯಗಳ ಬಗ್ಗೆ ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಿದೆ. ಹೆಚ್ಚು ಕ್ರಿಯಾಶೀಲರಾಗಿ ಹೊಸದಾದ ಕಾರ್ಯತಂತ್ರದೊಂದಿಗೆ ಮುನ್ನಡೆಯಬೇಕಿದೆ ಎಂದರು.

ಎಸ್​ಬಿಐ ಪ್ರಾದೇಶಿಕ ವ್ಯವಸ್ಥಾಪಕ ಜೆ.ಸಿ. ಚಂದ್ರ ಮಾತನಾಡಿ, ಉತ್ತಮ ಅಥವಾ ಕೆಟ್ಟ ದಿನಗಳಲ್ಲಿಯೂ ಕೈಗಾರಿಕೆಗಳ ನೆರವಿಗೆ ಬ್ಯಾಂಕ್ ಸದಾ ಮುಂದಿರುತ್ತದೆ. ಎಂಎಸ್​ಎಂಇ ವಲಯದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಹಲವು ಉಪಕ್ರಮಗಳನ್ನು ಕೈಗೊಂಡಿದ್ದು, ಎಸ್​ಬಿಐ ನೆರವಾಗಲಿದೆ ಎಂದು ಹೇಳಿದರು.

ನಿವೃತ್ತ ವಾಣಿಜ್ಯ ತೆರಿಗೆ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೊಳ, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜು ತಾಂತ್ರಿಕ ಗೋಷ್ಠಿಯಲ್ಲಿ ಮಾತನಾಡಿದರು. ಕೆಸಿಸಿಐ ಅಧ್ಯಕ್ಷ ಮಹೇಂದ್ರ ಲದ್ದಡ ಸ್ವಾಗತಿಸಿದರು. ಚೇತನ ಬಿಸಿನೆಸ್ ಸ್ಕೂಲ್ ನಿರ್ದೇಶಕ ಡಾ. ವಿ.ಎಂ. ಕೊರವಿ ಪ್ರಾಸ್ತಾವಿಕ ಮಾತನಾಡಿದರು. ಎನ್​ಕೆಎಸ್​ಎಸ್​ಐ ಅಧ್ಯಕ್ಷ ನಿಂಗಪ್ಪ ಬಿರಾದಾರ, ಕೆಸಿಸಿಐ ಪದಾಧಿಕಾರಿಗಳಾದ ವಿನಯ ಜವಳಿ, ಎಸ್.ಜಿ. ಕಮ್ಮಾರ, ವಸಂತ ಲದವಾ,

ಇತರರು ಇದ್ದರು. ಕಾರ್ಯದರ್ಶಿ ಅಶೋಕ ಗಡಾದ ವಂದಿಸಿದರು.