ಮೈಸೂರು: ರೈತರು ಏಕಬೆಳೆ ಪದ್ಧತಿಗೆ ಜೋತು ಬೀಳದೆ ಪ್ರತಿ ಹಂಗಾಮಿನಲ್ಲೂ ವಿವಿಧ ಬೆಳೆಗಳನ್ನು ಬೆಳೆದು ಮಣ್ಣಿನ ಫಲವತ್ತತೆಯನ್ನು ಕಾಪಾಡಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್. ಶಿವಲಿಂಗಯ್ಯ ಹೇಳಿದರು.
ಹೈದರಾಬಾದ್‌ನ ರಾಷ್ಟ್ರೀಯ ಕೃಷಿ ವಿಸ್ತರಣಾ ನಿರ್ವಹಣಾ ಸಂಸ್ಥೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಸಹಕಾರ ಸಂಘಗಳ ಸಿಬ್ಬಂದಿಗೆ ತರಬೇತಿ ಶಿಬಿರ, ಸಮಗ್ರ ಪೋಷಕಾಂಶಗಳ ನಿರ್ವಹಣೆ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಸಂಘಗಳಿಗೆ ರಸಗೊಬ್ಬರ, ಬಿತ್ತನೆ ಬೀಜವನ್ನು ಖರೀದಿಸಲು ಬಂದ ರೈತರೊಂದಿಗೆ ವೈಜ್ಞಾನಿಕವಾದ ಮಾಹಿತಿ ನೀಡಬೇಕು. ನ್ಯಾನೋ ರಸಗೊಬ್ಬರಗಳು ಹಾಗೂ ನೀರಿನಲ್ಲಿ ಕರಗುವ ರಸಗೊಬ್ಬರಗಳ ಕುರಿತು ರೈತರಿಗೆ ಮಾಹಿತಿ ನೀಡಿ ಅವುಗಳನ್ನು ಉಪಯೋಗಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಆರ್. ನಾರಾಯಣರೆಡ್ಡಿ ಮಾತನಾಡಿ, ತರಬೇತಿ ಪಡೆದ ಸಿಬ್ಬಂದಿ ವರ್ಗದವರು ಅರೆಕಾಲಿಕ ಕೃಷಿ ವಿಸ್ತರಣಾಧಿಕಾರಿಗಳಂತೆ ಕಾರ್ಯನಿರ್ವಹಿಸಬೇಕು. ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವ ಕುರಿತು ರೈತರಿಗೆ ಸರಿಯಾದ ಮಾಹಿತಿ ನೀಡಬೇಕು. ಅವುಗಳನ್ನು ಸರಿಯಾದ ಸಮಯದಲ್ಲಿ ವಿತರಿಸಬೇಕು, ಇದರಿಂದ ರೈತರ ವೆಚ್ಚವು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕಿ ಜ್ಯೋತಿ ಅರಸ್ ಮಾತನಾಡಿ, ತರಬೇತಿ ಪಡೆದ ಸಿಬ್ಬಂದಿ ಕಾಲಕಾಲಕ್ಕೆ ಕೃಷಿ ವಿಜ್ಞಾನಿಗಳನ್ನು ಸಂರ್ಪಕಿಸಿ ಆಯಾ ಕಾಲಕ್ಕೆ ಹೊಸದಾಗಿ ಮಾರುಕಟ್ಟೆಗೆ ಬರುವ ಸುಧಾರಿತ ಬಿತ್ತನೆ ಬೀಜಗಳು, ರಸಗೊಬ್ಬರಗಳ ಮಾಹಿತಿಯನ್ನು ರೈತರಿಗೆ ತಿಳಿಸಿಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಮಣ್ಣು ಕೃಷಿಯ ಕಣ್ಣು. ಆದ್ದರಿಂದ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ಸುಸ್ಥ್ಥಿರ ಮಣ್ಣಿನಿಂದ ಉತ್ತಮವಾದ ಬೆಳೆ ಬೆಳೆಯಬಹುದು. ಮಣ್ಣಿನಲ್ಲಿ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಜೈವಿಕ ಗೊಬ್ಬರಗಳಾದ ರೈಜೋಬಿಯಂ, ಸೂಡೊಮೊನಾಸ್ ಹಾಗೂ ಸೂಕ್ಷ್ಮಪೋಷಕಾಂಶ ಮಣ್ಣಿಗೆ ನಿಯಮಿತವಾಗಿ ಸೇರಿಸಬೇಕು ಎಂದರು.
ಕಡ್ಡಾಯವಾಗಿ 2 ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಿ, ಅದರಂತೆ ಪೋಷಕಾಂಶಗಳನ್ನು ನೀಡಬೇಕು. ತರಬೇತಿ ಪಡೆದ ಸಿಬ್ಬಂದಿ ಮಣ್ಣಿನ ಮಹತ್ವ ಹಾಗೂ ಮಣ್ಣು ಪರೀಕ್ಷೆ ಕುರಿತು ರೈತರಿಗೆ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು. ಯಾವುದೇ ಸಮಯದಲ್ಲಿ ತರಬೇತಿ ಪಡೆದ ಸಿಬ್ಬಂದಿ ಕೆವಿಕೆಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.