ಮೂಡಿಗೆರೆ: ರಾಜ್ಯದಲ್ಲಿ ಪ್ರತಿ ವರ್ಷ 100 ಕಾಲುಸಂಕ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರಿಸಲಾಗಿದೆ. 20 ಕೋಟಿ ರೂ. ಅನುದಾನದಲ್ಲಿ 20 ಕಡೆ ಕಾಲುಸಂಕ ನಿರ್ಮಾಣ ಕಾರ್ಯ ನಡೆದಿದೆ. ಉಳಿದಂತೆ 36 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಿಸಲು ತಲಾ 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರು ಮಳೆಯಿಂದ ಆಗಿರುವ ರಸ್ತೆ, ಸೇತುವೆ, ರೈತರ ಬೆಳೆ ಇತರ ಆಸ್ತಿಪಾಸ್ತಿ ಹಾನಿಯನ್ನು ವೀಕ್ಷಿಸಿದ ನಂತರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಳೆ ಹಾನಿ ಕುರಿತು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದಾರೆ. ವರದಿ ಬಂದ ಕೂಡಲೆ ಪರಿಹಾರ ಕಾರ್ಯ ನಡೆಯಲಿದೆ. ಮೇ 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅತಿವೃಷ್ಟಿ ನಿಭಾಯಿಸಲು ಎಲ್ಲ ಜಿಲ್ಲೆಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಲಿದ್ದಾರೆ. 2019ರಿಂದ ನಿರಂತರವಾಗಿ ಅತಿವೃಷ್ಟಿಯುಂಟಾಗಿ ಸೇತುವೆ, ರಸ್ತೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತದಿಂದ ಜಮೀನುಗಳಿಗೆ ಹಾನಿಯಾಗಿತ್ತು. ಅವೆಲ್ಲವನ್ನೂ ಸರಿಪಡಿಸಲಾಗಿದೆ. ಕೆಲವೆಡೆ ಸೇತುವೆ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಮೂಡಿಗೆರೆಯಿಂದ ಸಕಲೇಶಪುರಕ್ಕೆ ತೆರಳುವ 40 ಕಿ.ಮೀ. ರಸ್ತೆ ಗುಂಡಿಮಯವಾಗಿದೆ. ಅದನ್ನು ಅಭಿವೃದ್ಧಿಪಡಿಸಲು ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಲಿದ್ದಾರೆ. ನಂತರ ಮತ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. 2014ರಲ್ಲಿ ಡಾ. ಎಚ್.ಸಿ.ಮಹದೇವಪ್ಪ ಲೋಕೋಪಯೋಗಿ ಸಚಿವರಾಗಿದ್ದಾಗ ರಾಜ್ಯದ ವಿವಿಧಡೆ 40 ಸೇತುವೆ ಮಂಜೂರು ಮಾಡಿದ್ದರು. ಅದರ ನಿರ್ಮಾಣ ಕಾಮಗಾರಿ ಹೊಣೆಯನ್ನು ಕೆಆರ್‌ಡಿಸಿಎಲ್ ಸಂಸ್ಥೆಗೆ ವಹಿಸಲಾಗಿತ್ತು. ಅದರಲ್ಲಿ 20 ಸೇತುವೆ ನಿರ್ಮಾಣ ಮುಗಿದಿದೆ. ಇನ್ನೂ 20 ಕಡೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮೂಡಿಗೆರೆಯಿಂದ ಸಕಲೇಶಪುರಕ್ಕೆ ತೆರಳುವ ರಾಜ್ಯ ಹೆದ್ದಾರಿಯ ಬೆಟ್ಟದಮನೆ ಗ್ರಾಮದಲ್ಲಿ ಹೇಮಾವತಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ 11 ವರ್ಷದಿಂದ ಮುಗಿದಿಲ್ಲ. ತಾಂತ್ರಿಕ ಅಡಚಣೆಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಕೆಆರ್‌ಡಿಸಿಎಲ್ ಸಂಸ್ಥೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕಾಡಾನೆ ಮತ್ತಿತರ ಕಾಡುಪ್ರಾಣಿಗಳ ಸಮಸ್ಯೆ ಹೆಚ್ಚಾಗಿದೆ. ಅದಕ್ಕೆ ಅರಣ್ಯದ ಸುತ್ತ ವಾರ್ಷಿಕ 100 ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು. ಗುಂಡ್ಲುಪೇಟೆ, ಹಾಸನ ಮತ್ತಿತರ ಕಡೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಇರುವ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ನೀಲಿನಕ್ಷೆ ತಯಾರಿಸಲಾಗಿದೆ. ಕಾಡಾನೆಗಳಿಗೆ ಅರಣ್ಯದಲ್ಲಿ ನೀರು ಮತ್ತು ಆಹಾರವಿಲ್ಲದೆ ಕಂಗಾಲಾಗಿ ನಾಡಿಗೆ ಆಹಾರ, ನೀರು ಹುಡುಕಿಕೊಂಡು ಬರುತ್ತಿವೆ. ಎಲಿಫಂಟ್ ಕಾರಿಡಾರ್ ನಿರ್ಮಿಸಿ ಅಲ್ಲಿ ನೀರು, ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.
ಮಂಗಳೂರಿನಲ್ಲಿ ಅಮಾಯಕ ಯುವಕರ ಕೊಲೆ ನಡೆಯುತ್ತಿರುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ. ಇದರಲ್ಲಿ ಸರ್ಕಾರದ ವೈಫಲ್ಯವಿಲ್ಲ. ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲಿದೆ. ನಕ್ಸಲ್ ನಿಗ್ರಹ ದಳವನ್ನು ಸರ್ಕಾರ ಮಂಗಳೂರಿಗೆ ನೇಮಿಸಿದೆ. ನೈತಿಕ ಪೊಲೀಸ್‌ಗಿರಿ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವವರನ್ನು ನಿಯಂತ್ರಿಸುವಂತೆ ತಂಡಕ್ಕೆ ಸೂಚಿಸಲಾಗಿದೆ. ಮುಸ್ಲಿಮರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಕ್ಷಣೆ ಸಿಗುತ್ತಿಲ್ಲ, ಅಮಾಯಕರ ಕೊಲೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಾಜೀನಾಮೆ ನೀಡಿರುವ ಮಾಹಿತಿ ಇದೆ. ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ರಾಜೀನಾಮೆ ನೀಡದಂತೆ ಮನವೊಲಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ಚಿತ್ರದುರ್ಗ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್, ಎಸ್ಪಿ ಡಾ. ವಿಕ್ರಮ್ ಅಮಟೆ ಇತರರಿದ್ದರು.