ಜಿಲ್ಲೆ

ಪ್ರತಿ ಮನೆಯಲ್ಲಿ ಕಸದ ಉತ್ಪತ್ತಿಯನ್ನು ಕಡಿಮೆ ಮಾಡಿ: ಚಂದ್ರಶೇಖರ್

ಹಾಸನ: ಪ್ರತಿ ಮನೆಯಲ್ಲಿ ಕಸದ ಉತ್ಪತ್ತಿಯನ್ನು ಕಡಿಮೆ ಮಾಡಿ, ಹಸಿ ಕಸವನ್ನು ಮನೆಯಲ್ಲೇ ಗೊಬ್ಬರ ಮಾಡಿ, ಒಣ ಕಸವನ್ನು ಶೇಖರಿಸಿ ಮರುಬಳಕೆ ಕೇಂದ್ರಕ್ಕೆ ತಲುಪಿಸಿದರೆ ಕಸದ ನಿರ್ವಹಣೆ ತುಂಬಾ ಸುಲಭ ಎಂದು ನಗರದ ಪರಿಸರ ಆಧಾರಿತ ಕ್ಲಿಯರಿನ್ ಸಂಸ್ಥೆಯ ಮುಖ್ಯಸ್ಥ ಚಂದ್ರಶೇಖರ್ ತಿಳಿಸಿದರು.
ನಗರದ ಸಮೀಪ ಇರುವ ಭುವನಳ್ಳಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿ ಆತ್ಮನಿರ್ಭರ ಗ್ರಾಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಗ್ರಾಮದ ನಿವಾಸಿಗಳು ನನ್ನ ಕಸ ನನ್ನದೇ ಹೊಣೆ ಎಂಬ ಜವಾಬ್ದಾರಿಯನ್ನು ನಿರ್ವಹಿಸಿದರೆ ಮಾತ್ರ ಗಾಂಧೀಜಿಯವರ ಸ್ವಚ್ಛ ಭಾರತದ ಕನಸು ನನಸಾಗುವ ಕಾಲ ಹೆಚ್ಚು ದೂರವಿಲ್ಲ ಎಂದು ಅಭಿಪ್ರಾಯಪಟ್ಟರು.
ಯೋಜನಾಧಿಕಾರಿ ನವೀನ್ ಕುಮಾರ್ ಮಾತನಾಡಿ, ಹಸಿ ಕಸವನ್ನು ಗೊಬ್ಬರ ಮಾಡಿ, ಮನೆಯಲ್ಲೇ ತರಕಾರಿ, ಹೂವಿನ ಗಿಡಗಳನ್ನು ಬೆಳೆದು ಗ್ರಾಮಸ್ಥರು ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದು ಕರೆ ನೀಡಿದರು.
ಧರ್ಮಸ್ಥಳ ಸಂಸ್ಥೆ, ಕ್ಲಿಯರಿನ್ ಸಂಸ್ಥೆಯಿಂದ ಭುವನಳ್ಳಿ ಗ್ರಾಮ ನಿವಾಸಿಗಳಿ ಹಸಿ ಕಸ ಗೊಬ್ಬರ ಮಾಡುವ ಘಟಕವನ್ನು ಉಚಿತವಾಗಿ ವಿತರಿಸಿ ಸ್ವಚ್ಛ ಗ್ರಾಮದ ಕಲ್ಪನೆಗೆ ಮುನ್ನುಡಿ ಬರೆಯಿತು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ತುಳಸಿರಾಮ್, ಕರಿಯಣ್ಣ, ರೋಟರಿ ಕ್ವಾಂಟ ಮಾಜಿ ಅಧ್ಯಕ್ಷರಾದ ಬೊಮ್ಮೇಗೌಡ, ನಾಗೇಶ, ರಮೇಶ್, ಹಂಸಾ ಇತರರು ಉಪಸ್ಥಿತರಿದ್ದರು.