ಜಿಲ್ಲೆ

ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ

ಬಳ್ಳಾರಿ : ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿಯೊಂದು ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದೆ ಡಾ. ಮಾತಾ ಬಿ. ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.
ಇಲ್ಲಿನ ವಾಲ್ಮೀಕಿ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಜಿಲ್ಲಾ ಕ್ರೈಸ್ ವಸತಿ ಶಾಲೆಗಳ ಶಿಕ್ಷಕರ ದಿನಾಚರಣೆ ಹಾಗೂ ಸ್ಮರಣ ಸಂಚಿಕೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗಂಡು, ಹೆಣ್ಣು, ಲಿಂಗತ್ವ ಅಲ್ಪಸಂಖ್ಯಾತರಿಗೂ ಸಮಾನವಾದ ಹಕ್ಕಿದೆ. ಸಮಾಜದಲ್ಲಿ ನಾವು ಹೀಗೆ ಆಗಬೇಕು. ಹೀಗೆ ಹುಟ್ಟಬೇಕು ಎಂದು ಯಾರಿಗೂ ಗೊತ್ತಾಗುವುದಿಲ್ಲ. ನಾನು ಹೆಣ್ಣಾಗಿ ಪರಿವರ್ತನೆಯಾಗಿ ಸಮಾಜದಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿದ್ದೇನೆ ಎಂದು ಬದುಕಿನ ಸತ್ಯ ಬಿಚ್ಚಿಟ್ಟರು. ಗಂಡಾಗಲಿ, ಹೆಣ್ಣಾಗಲಿ, ಯಾರೇ ಆಗಲಿ ಪ್ರತಿಯೊಬ್ಬರಿಗೂ ಒಂದು ಬದುಕಿದೆ. ಅದನ್ನು ಹುಡುಕಿಕೊಂಡು ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಪೋಷಕರು ಆಸೆ, ಆಕಾಂಕ್ಷೆ ಬದಿಗೊತ್ತಿ ಮಕ್ಕಳಿಗಾಗಿ ಜೀವನ ಸವೆಸುತ್ತಾರೆ. ಅದಕ್ಕೆ ಮೋಸ ಮಾಡಬಾರದು ಎಂದು ಹೇಳಿದರು. ಸುತ್ತಮುತ್ತ ಯಾರಾದರೂ ಪರಿವರ್ತನೆಯಾದರೆ ಅದನ್ನು ಅಪಹಾಸ್ಯ ಮಾಡಬೇಡಿ. ಅವಮಾನಿಸಬೇಡಿ, ಬದಕಲು ಅವಕಾಶ ಮಾಡಿಕೊಡಿ. ನಿಮ್ಮ ಕುಟುಂಬದಲ್ಲಿ ನನ್ನಂತೆ ಯಾವುದಾದರೂ ಮಗು ಹುಟ್ಟಿದರೆ ಹಣ, ಆಸ್ತಿ ಮಾಡಬೇಡಿ. ವಿದ್ಯಾಭ್ಯಾಸ ಕೊಡಿ. ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಮುಂದೆ ಕೀರ್ತಿ ಹೆಚ್ಚಿಸುವ ಕೆಲಸ ಮಾಡುತ್ತಾರೆ ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವಿದೆ. ಮುಂದೆ ಉನ್ನತ ಶಿಕ್ಷಣದ ಜತೆಗೆ ಕೌಶಲ್ಯ ಆಧಾರಿತ ಶಿಕ್ಷಣಬೇಕಿದೆ. ಹಾಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅಂದಾಗ ಮಕ್ಕಳು ಗುರಿ ಹೊಂದುತ್ತಾರೆ. ಗುರಿ ಸರಿಯಾಗಿದ್ದರೆ ಸಾಧನೆ ಮಾಡಬಹುದು ಎಂದರು. ಬಳಿಕ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಸಂಕ್ಷಿಪ್ತ ಮಾಹಿತಿಯುಳ್ಳ ಸ್ಮರಣ ಸಂಚಿಕೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಳಿಕ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.