ಜಿಲ್ಲೆ

ಪ್ರತಿ ತಾಲೂಕಿನಲ್ಲಿ 2 ಸರ್ಕಾರಿ ಗೋಶಾಲೆ

ಬೀದರ್: ದೇಸಿ ತಳಿ ಗೋವುಗಳ ಸಂರಕ್ಷಣೆ, ಸಂವರ್ಧನೆಗೆ ರಾಜ್ಯದ ಪ್ರತಿ ತಾಲೂಕಿನಲ್ಲಿ ಸರ್ಕಾರದಿಂದಲೇ ಎರಡು ಗೋ ಶಾಲೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.

ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋ ಶಾಲೆ ವಾರ್ಷಿಕೋತ್ಸವ, ನೂತನ ಶೆಡ್ ಹಾಗೂ ಗೋ ರಥ ಮಂಗಳವಾರ ಉದ್ಘಾಟಿಸಿ ಮಾತನಾಡಿ, ಗೋ ಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಜಾರಿಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದರೊಟ್ಟಿಗೆ ಗೋವುಗಳ ರಕ್ಷಣೆಗೂ ನಾನಾ ಕಾರ್ಯಯೋಜನೆ ರೂಪಿಸುತ್ತಿದೆ. ಇದಕ್ಕೆ ಪೂರಕವಾಗಿ ಸರ್ಕಾರವೇ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆ ನಿರ್ಮಿಸಲಿದೆ. ಗೋಮಾಳ ಸೇರಿದಂತೆ ಸರ್ಕಾರದ ಜಾಗ ಇದಕ್ಕಾಗಿ ಪಡೆಯಲಾಗುತ್ತಿದೆ ಎಂದರು.

ಗೋವು ನಮ್ಮ ಧರ್ಮ, ಸಂಸ್ಕೃತಿ ಹಾಗೂ ಪರಂಪರೆ. ಹೆತ್ತವಳ ನಂತರ ಮಾತೆ ಸ್ಥಾನ ನೀಡಲಾಗಿದೆ. ಒಂದೂ ಗೋವು ಕಸಾಯಿಖಾನೆಗೆ ಹೋಗಬಾರದು ಎಂಬುದು ಸರ್ಕಾರದ ಧ್ಯೇಯ. ಈ ಸಂಬಂಧ ಸ್ವತಃ ಸಿಎಂ ಯಡಿಯೂರಪ್ಪ ಅವರು ಇತ್ತೀಚೆಗೆ ಸಭೆ ನಡೆಸಿ ಎಲ್ಲ ಡಿಸಿ, ಎಸ್ಪಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಗೋ ಹತ್ಯೆಗೆ ಬ್ರೇಕ್ ಹಾಕುವ ಜತೆಗೆ ಗೋ ರಕ್ಷಣೆಯಲ್ಲಿ ತೊಡಗಿದವರಿಗೂ ಸರ್ಕಾರ ಎಲ್ಲರ ರೀತಿಯ ಸಾಥ್ ನೀಡಲಿದೆ. ಸರ್ಕಾರಿ ಗೋಶಾಲೆಗಳಿಗೆ ಗೋಮಾಳ ಜಾಗ ಪಡೆದ ನಂತರ ಖಾಸಗಿಯಾಗಿ ಗೋಶಾಲೆ ನಡೆಸುತ್ತಿರುವ ಸಂಘ-ಸಂಸ್ಥೆ, ಮಠ-ಮಂದಿರಗಳಿಗೂ ಭೂಮಿ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ಗೋ ಆಧರಿತ ಕೃಷಿ ಇಂದಿನ ಅನಿವಾರ್ಯತೆ ಎನಿಸಿದೆ. ರೈತರು ಸುಖಿಯಿದ್ದಾಗಲೇ ದೇಶ ಸುಸ್ಥಿತಿಯಲ್ಲಿರುತ್ತದೆ. ಗೋ ಸೇವೆ ಅತ್ಯಂತ ಪುಣ್ಯದ ಕೆಲಸ. ಗೋ ಸೇವೆಯಲ್ಲಿ ತೊಡಗುವವರ ಹಿಂದೆ ಸಮಾಜ ನಿಲ್ಲಬೇಕು. ರಾಮಕೃಷ್ಣ ಆಶ್ರಮದ ಬಹುಮುಖಿ ಸೇವಾ ಕಾರ್ಯಗಳು ಶ್ಲಾಘನೀಯ ಎಂದು ಬಣ್ಣಿಸಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮ ಅಧ್ಯಕ್ಷರೂ ಆದ ಗೋ ಶಾಲೆ ರೂವಾರಿ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಸಾನ್ನಿಧ್ಯ, ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಹೀಮ್ ಖಾನ್, ವಿಧಾನಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಕೆಎಸ್ಐಐಡಿ ನಿಗಮ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಡಿಎ ಅಧ್ಯಕ್ಷ ಬಾಬು ವಾಲಿ, ಡಿಸಿ ರಾಮಚಂದ್ರನ್, ಸಿಇಒ ಗ್ಯಾನೇಂದ್ರಕುಮಾರ ಗಂಗವಾರ, ಎಸಿ ಗರೀಮಾ ಪನ್ವಾರ್, ಅಪರ ಡಿಸಿ ರುದ್ರೇಶ ಘಾಳಿ ಇತರರಿದ್ದರು. ಗೋಶಾಲೆಗೆ ತನು, ಮನ, ಧನದಿಂದ ದುಡಿಯುತ್ತಿರುವ 40ಕ್ಕೂ ಹೆಚ್ಚು ಗೋ ಸೇವಕರನ್ನು ಸತ್ಕರಿಸಲಾಯಿತು. ಗೋ ಸೇವಾ ಸಮಿತಿ ಸದಸ್ಯ ವಿರೂಪಾಕ್ಷ ಗಾದಗಿ ನಿರೂಪಣೆ ಮಾಡಿದರೆ, ವೀರಶೆಟ್ಟಿ ಪಟ್ನೆ ವಂದಿಸಿದರು.

ಇಂಜಿನಿಯರ್ ಗಿಂತ ಜಾಸ್ತಿ ಪಗಾರ!
ಎರಡು ಗೋವುಗಳಿಂದ ಆರಂಭವಾದ ಗೋ ಶಾಲೆಯಲ್ಲಿ ಈಗ 100ಕ್ಕೂ ಹೆಚ್ಚು ಹಸುಗಳಿವೆ. ನಿರುದ್ಯೋಗಿ ಯುವಕರನ್ನು ಗೋ ಆಧರಿತ ಕೃಷಿಯತ್ತ ಸೆಳೆದು ಸ್ವಾವಲಂಬಿ ಮಾಡುವುದೇ ಗೋಶಾಲೆ ಧ್ಯೇಯ. ಇಂದಿನ ಸ್ಥಿತಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳಿಗೆ 10-12 ಸಾವಿರ ರೂ. ವೇತನ ನೀಡಲಾಗುತ್ತಿದೆ. ಆದರೆ ಹಾಲು ಕೆರೆಯುವ ನೌಕರರಿಗೆ 15 ಸಾವಿರ ಸಂಬಳ ಸಿಗುತ್ತಿದೆ. ಯಾವ ಕೆಲಸದಲ್ಲಿ ಲಾಭ ಹಾಗೂ ತೃಪ್ತಿಯಿದೆ ಎಂಬುದನ್ನು ಯುವ ಜನತೆ ಅರಿಯಬೇಕಿದೆ ಎಂದು ಸ್ವಾಮಿ ಜ್ಯೋತಿರ್ಮಯಾನಂದ ಹೇಳಿದರು.

ಸಚಿವರಿಂದ ಆಜೀವ ಸದಸ್ಯತ್ವ
ಗೋಶಾಲೆ ನಡೆಸುವುದು ಅತ್ಯಂತ ಕಷ್ಟ ಮತ್ತು ಕಠಿಣವಾದ ಕೆಲಸ. ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ನಡೆಸುತ್ತಿಲ್ಲ. ಯವಕರಿಗೆ ಸ್ವಾವಲಂಬಿ ಮಾಡಲು ಪ್ರೇರಣೆ ತುಂಬುವ ಕೇಂದ್ರ ಇದಾಗಬೇಕೆಂಬ ಧ್ಯೇಯದಿಂದ ಆರ್ಥಿಕ ಸಂಕಷ್ಟಗಳ ನಡುವೆಯೂ ಗೋಶಾಲೆ ನಡೆಸುತ್ತಿದ್ದೇವೆ. ಗೋವುಗಳ ನಿರ್ವಹಣೆ ನಿತ್ಯದ ಸವಾಲು. ಈ ದಿಸೆಯಲ್ಲಿ ಆಶ್ರಮದ ಗೋ ಸೇವಾ ಸಮಿತಿಯು ಗೋ ಸೇವೆಗಾಗಿ ಭಕ್ತರ, ದಾನಿಗಳ ನೆರವು ಪಡೆಯುತ್ತಿದೆ. ಗೋ ಸೇವೆಗೆ ಆಜೀವ ಸದಸ್ಯತ್ವ ಅಭಿಯಾನ ನಡೆಸುತ್ತಿದೆ. ಇದಕ್ಕೆ ಸಹಕರಿಸಬೇಕೆಂದು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಕೋರಿದರು. ಇದಕ್ಕೆ ಸ್ಪಂದಿಸಿದ ಸಚಿವ ಪ್ರಭು ಚವ್ಹಾಣ್ ಅವರು, 1 ಲಕ್ಷ ರೂ. ನೀಡಿ ನಾನೇ ಮೊದಲ ಆಜೀವ ಸದಸ್ಯತ್ವ ಪಡೆಯುವುದಾಗಿ ಘೋಷಿಸಿದರು. ಗೋ ಸೇವೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋ ಶಾಲೆ ಸೇವೆ ಮಾದರಿಯಾಗಿದೆ. ದೇಸಿ ತಳಿ ಸಂರಕ್ಷಣೆ, ಸಂವರ್ಧನೆ ಜತೆಗೆ ಯುವಕನ್ನು ಗೋ ಆಧರಿತ ಕೃಷಿಯತ್ತ ಸೆಳೆಯಲು ಪ್ರೇರಣೆ ನೀಡುವ ಮಹತ್ಕಾರ್ಯ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾಡುತ್ತಿದ್ದಾರೆ. ಗೋಶಾಲೆಗೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು.| ಪ್ರಭು ಚವ್ಹಾಣ್ಜಿಲ್ಲಾ ಉಸ್ತುವಾರಿ ಸಚಿವ