ಬೆಳಗಾವಿ: ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ 5500 ರೂ. ಬೆಲೆ ಏರಿಕೆ ಮಾಡಬೇಕು ಎಂದು ಆಗ್ರಹಿಸಿ ಅ.10ರಂದು ಜಿಲ್ಲಾಡಳಿತ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜಾರಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಡೀಸೆಲ್, ಪೆಟ್ರೋಲ್, ದಿನಬಳಕೆ ವಸ್ತುಗಳು, ಕೃಷಿ ಸಲಕರಣೆ, ಕಾರ್ಮಿಕರ ಕೂಲಿ, ರಸಗೊಬ್ಬರ, ಬೀಜದರ ದುಪ್ಪಟ್ಟು ಹೆಚ್ಚಾಗಿದೆ. ಆದರೆ, ಕಬ್ಬಿನ ದರ ಮಾತ್ರ ಹೆಚ್ಚಾಗಿಲ್ಲ. ಹತ್ತು ವರ್ಷಗಳಿಂದ ಟನ್ ಕಬ್ಬಿಗೆ 2000 ರಿಂದ 2600 ರೂ. ಮಾತ್ರ ಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಗಳು ಮತ್ತು ಸಕ್ಕರೆ ಕಾರ್ಖಾನೆಗಳು ಎಫ್‌ಆರ್‌ಪಿ ಕಬ್ಬಿನ ದರ ಹೆಸರಿನಲ್ಲಿ ಬೆಳೆಗಾರರಿಗೆ ಮೋಸ ಮಾಡಿಕೊಂಡು ಬರುತ್ತಿವೆ. ಕಬ್ಬು ಸಾಗಾಣಿಕೆ, ಕಟಾವು, ತೂಕ ಹಾಗೂ ಇಳುವರಿ ಹೆಸರಿನಲ್ಲಿ ರೈತರಿಗೆ ಮೋಸ ಮಾಡುತ್ತಿವೆ. ರೈತರು ಕಳುಹಿಸುವ ಕಬ್ಬಿನಿಂದಲೇ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ವಾರ್ಷಿಕ 28 ರಿಂದ 30 ಸಾವಿರ ಕೋಟಿ ರೂ. ವರೆಗೆ ತೆರಿಗೆ ಕಟ್ಟುತ್ತವೆ. ಆದರೆ ಸರ್ಕಾರ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬಿನ ಉಪ ಉತ್ಪನ್ನಗಳಿಂದ ನೂರಾರು ಕೋಟಿ ರೂ. ಆದಾಯ ಗಳಿಸುತ್ತಿವೆ. ರೈತರಿಗೆ ಅದರ ಲಾಭಾಂಶ ನೀಡುತ್ತಿಲ್ಲ. ಕಟಾವು, ಸಾಗಾಟ ಹೊರತುಪಡಿಸಿ ಎಫ್‌ಆರ್‌ಪಿ ದರ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಕಬ್ಬಿನ ಇಳುವರಿ ಪ್ರಕಾರ ಪ್ರತಿ ಟನ್ ಕಬ್ಬಿಗೆ ಸುಮಾರು 5,500 ರೂ. ವರೆಗೆ ನೀಡಬೇಕು. ಆದರೆ, 2600 ರೂ. ವರೆಗೆ ಮಾತ್ರ ನೀಡುತ್ತಿವೆ. ಅ.7ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಕಬ್ಬಿನ ದರ ಹೆಚ್ಚಳಕ್ಕೆ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅ.10ರಂದು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದರು. ಉಪಾಧ್ಯಕ್ಷ ಶಿವಾನಂದ ಮುಗಳಿಹಾಳ್, ಪ್ರಕಾಶ ನಾಯಕ್ ಇತರರಿದ್ದರು.