ಬೆಂಗಳೂರು ಗ್ರಾಮಾಂತರ: ಪ್ರತಿ ವ್ಯಕ್ತಿಯ ಹುಟ್ಟಿನಿಂದಲೇ ಬರುವ ಮಾನವ ಹಕ್ಕುಗಳನ್ನು ರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿ. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯದಿಂದ ಜೀವಿಸುವ ಹಕ್ಕಿದೆ. ಇದನ್ನು ಕಸಿದುಕೊಳ್ಳುವ ಪ್ರಯತ್ನಕ್ಕೆ ಯಾರೂ ಮುಂದಾಗಬಾರದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಬೆಂಗಳೂರಿನ ರಾಜ್ಯ ಮಾನವ ಹಕ್ಕುಗಳ ಆಯೋಗ, ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ದೇವನಹಳ್ಳಿ ತಾಲೂಕು ಬೀರಸಂದ್ರದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಮಾತನಾಡಿದರು.
ಜಾತಿ, ಧರ್ಮ, ಲಿಂಗ, ಭಾಷೆ ವರ್ಣದ ಆಧಾರದ ಮೇಲೆ ಮನುಷ್ಯನನ್ನು ಅವಹೇಳನ ಮಾಡುವಂತಿಲ್ಲ. ಮನುಷ್ಯನ ಘನತೆಗೆ ಕುಂದುಬಾರದಂತೆ ಗೌರವಯುತ ಜೀವನ ನಡೆಸಲು ಮಾನವ ಹಕ್ಕುಗಳು ಅತ್ಯವಶ್ಯಕ. ಎಲ್ಲರನ್ನೂ ಗೌರವಿಸುವ ಪ್ರವೃತ್ತಿಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯನ ಘನತೆ, ಭದ್ರತೆ, ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಕುಂದುಬಾರದಂತೆ ರಕ್ಷಿಸುವುದೇ ಮಾನವ ಹಕ್ಕುಗಳ ಉದ್ದೇಶವಾಗಿದ್ದು, ಈ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಬಾಲ್ಯದಿಂದಲೇ ಮಕ್ಕಳಿಗೆ ತಿಳಿವಳಿಕೆ ನೀಡಬೇಕು ಎಂದರು.
ಎಲ್ಲ ವಯೋಮಾನದವರಿಗೂ ಮಾನವ ಹಕ್ಕು ಎಂಬುದಿದೆ. ಈ ಹಕ್ಕುಗಳು ಉಲ್ಲಂಘನೆಯಾಗದಂತೆ ರಕ್ಷಿಸುವ ಕೆಲಸ ಮಾನವ ಹಕ್ಕು ಆಯೋಗ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಇ. ರವಿಕುಮಾರ್ ಹೇಳಿದರು. ಇತ್ತೀಚಿನ ದಿನಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯಂಥ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಪ್ರಜಾಪ್ರಭುತ್ವದಲ್ಲಿ ನಾಗರಿಕರಾದ ನಾವೆಲ್ಲರೂ ಈ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ, ದೇವನಹಳ್ಳಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾರೇಗೌಡ, ಮಾನವ ಹಕ್ಕುಗಳು ಉಲ್ಲಂಘನೆಯಾದಲ್ಲಿ ಅವುಗಳ ರಕ್ಷಣೆಗೆ ಕ್ರಮ ಹಾಗೂ ವ್ಯಕ್ತಿಗೆ ಪುನರ್ವಸತಿ ಕಲ್ಪಿಸುವ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ಅಡ್ವೊಕೇಟ್ ಚಿನ್ನಮ್ಮ ಮಾತನಾಡಿ, ಮಾನವ ಹಕ್ಕುಗಳ ಕುರಿತು ಬೇರೆ ಬೇರೆ ದೇಶಗಳಲ್ಲಿ ನಡೆದ ಪ್ರಕ್ರಿಯೆ ಕುರಿತು ವಿವರಿಸಿದರು. ಪೊಲೀಸ್ ಇಲಾಖೆ, ಜೈಲುಗಳು, ಕಾರ್ಖಾನೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ದೂರುಗಳು ಕೇಳಿ ಬರುತ್ತಿವೆ ಎಂದರು.