ತುಮಕೂರು: ಕೊರಟಗೆರೆ ಬಸ್ ನಿಲ್ದಾಣದಲ್ಲಿ ನಡೆದ ದಲಿತ ಬಾಲಕ ಮಲ ಹೊತ್ತ ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಾಗಿದೆ, ಆರೋಪಿತ ಕೂಡ ಪರಿಶಿಷ್ಟ ಜಾತಿಗೆ ಸೇರಿರುವುದರಿಂದ ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ
ಶುಭಕಲ್ಯಾಣ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿಗಳ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ತೆಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯದವರನ್ನು ಮಲ ಸ್ವಚ್ಛಗೊಳಿಸಲು ಬಳಸಿಕೊಂಡಿರುವ ಟನೆಯನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಂಡಿದೆ ಎಂದು ದಲಿತ ಮುಖಂಡರಿಗೆ ಭರವಸೆ ನೀಡಿದರು.
ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸ್ಮಶಾನ ಭೂಮಿ ಮೀಸಲಿಡಲು ಈಗಾಗಲೇ ಸೂಚನೆ ನೀಡಲಾಗಿದ್ದು, ಮುಂದಿನ ಸಭೆಯೊಳಗೆ ಸ್ಮಶಾನ ಭೂಮಿ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸಲು ಸೂಚಿಸಿದ ಡಿಸಿ ಅವರು, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ ಸ್ಮಶಾನ ಭೂಮಿ ಸರ್ವೇ ಮಾಡಿ, ಭೂಮಿ ಒತ್ತುವರಿಯಾಗದಂತೆ ಅಗತ್ಯ ಕ್ರಮ ಕೈಗೊಂಡು ಅಭಿವೃದ್ಧಿ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ನಿಗಮಗಳಲ್ಲಿ ಭೂ-ಒಡೆತನ ಯೋಜನೆಯಲ್ಲಿ ಪರಿಶಿಷ್ಟರಿಗೆ ನೀಡಲಾಗುವ ಭೂಮಿ ಫಲಾನುಭವಿಗಳೇ ಅನುಭವಿಸುತ್ತಿರುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು ಮತ್ತು ಅಂತಹ ಭೂಮಿ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ನಿಗಮಗಳ ಅಧಿಕಾರಿಗಳಿಗೆ ಹೇಳಿದರು.
ತಾಲೂಕುಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ವಿದ್ಯಾರ್ಥಿ ನಿಲಯಗಳ ಕುಂದು&-ಕೊರತೆಗಳ ಬಗ್ಗೆ ವರದಿ ನೀಡಬೇಕು. ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನವನ್ನು ಬಾಕಿ ಉಳಿಸಿಕೊಳ್ಳದೆ ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಎಸ್ಸಿ, ಎಸ್ಟಿ ದೌರ್ಜನ್ಯ ಪ್ರಕರಣಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, 2018ರಿಂದ ದಾಖಲಾಗಿರುವ 33 ಪ್ರಕರಣಗಳ ಪೈಕಿ 7 ಫಲಾನುಭವಿಗಳಿಗೆ ನಿಯಮಾನುಸಾರವಾಗಿ ಉದ್ಯೋಗ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿರುವ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚುವರಿ ಶೌಚಗೃಹಗಳ ಬೇಡಿಕೆಯಿದ್ದು, ಶೌಚಗೃಹ ನಿಮಾರ್ಣಕ್ಕೆ ಅನುದಾನ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಜೆಡಿ ಕೃಷ್ಣಪ್ಪ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಮಾತನಾಡಿ, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಹೆಚ್ಚಿನ ಪ್ರಕರಣಗಳು ದಾಖಲಾದರೂ ಸಹ ದೌರ್ಜನ್ಯ ತಡೆ ಕಾಯ್ದೆಯಡಿ ಸರಿಯಾದ ಸಾಕ್ಷಿಗಳಿಲ್ಲದಿರುವ ಮತ್ತು ಪ್ರಕರಣಗಳನ್ನು ಹಿಂಪಡೆಯುವುದರಿಂದ ನ್ಯಾಯಾಲಯದಲ್ಲಿ ಶಿಕ್ಷೆಯಾಗುವ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳಲ್ಲಿ ದೂರುದಾರರು ಬಲವಾಗಿ ಪ್ರಕರಣವನ್ನು ಮುನ್ನಡೆಸಬೇಕು. ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯ ಯಾವಾಗಲೂ ನೊಂದವರ ಪರವಾಗಿರುತ್ತದೆ ಎಂದರು. ಜಿಪಂ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತ ಬಿ.ವಿ.ಆಶ್ವಿಜ, ಜಿಪಂ ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಉಪ ವಿಭಾಗಾಧಿಕಾರಿ ಸಪ್ತಶ್ರೀ ಹಾಗೂ ಗೌರವ್ ಕುಮಾರ್ ಶೆಟ್ಟಿ, ಎಚ್.ಶಿವಪ್ಪ, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಎ.ರಾಜಣ್ಣ, ಕೆ.ರಂಜನ್, ಗೋವಿಂದರಾಜು, ಕೆ.ಆರ್.ಶ್ರೀಧರ, ವಸಂತ್ ಕುಮಾರ್, ಡಾ.ಮುಕುಂದ ರಾಜು ಹಾಗೂ ನಾರಾಯಣಪ್ಪ ಮತ್ತಿತರರು ಇದ್ದರು.