ಮೈಸೂರು: ಮಾನಸಿಕ ಸಮಸ್ಯೆಗೆ ಸಿಲುಕಿರುವ ಜನರ ಪುನರ್ವಸತಿಗಾಗಿ ಮಾನಸಿಕ, ಸಾಮಾಜಿಕ ಆರೈಕೆ ಕೇಂದ್ರ ತೆರೆಯುವ ಅಗತ್ಯ ಇದೆ ಎಂದು ಗುಜರಾತ್ ಗಾಂಧಿನಗರದ ವಿಧಿವಿಜ್ಞಾನ ಮನೋವಿಜ್ಞಾನದ ಪ್ರಾಧ್ಯಾಪಕಿ ಪ್ರೊ.ಎಸ್.ಎಲ್.ವಾಯಾ ಹೇಳಿದರು.
ಮೈಸೂರು ವಿಶ್ವವಿದ್ಯಾಲಯ ಮನೋವಿಜ್ಞಾನ ಅಧ್ಯಯನ ವಿಭಾಗ, ಮೈವಿವಿ ಮನೋವಿಜ್ಞಾನ ವಿಭಾಗದ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮನೋವಿಜ್ಞಾನ ವಿಚಾರಸಂಕಿರಣದಲ್ಲಿ ಮಾತನಾಡಿದರು.
ಮಾನಸಿಕ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಈಗಿನ ಕಾಲದಲ್ಲಿ ಮನೋವಿಜ್ಞಾನ ಹೆಚ್ಚಿನ ಮಹತ್ವ ಬಂದಿದೆ. ಪ್ರತಿ ಕ್ಷೇತ್ರಕ್ಕೂ ಮನೋವಿಜ್ಞಾನ ಅಗತ್ಯವಾಗಿದೆ. ಇದರ ಫಲವಾಗಿ ಮನಶಾಸ್ತ್ರಜ್ಞರು ಕ್ರೀಡೆ, ಶಿಕ್ಷಣ, ಸೇರಿದಂತೆ ವಿವಿಧ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಮನೋವಿಜ್ಞಾನ ವಿಸ್ತಾರವಾಗಿ ಬೆಳೆಯಲು ಅನುಕೂಲವಾಗಿದೆ ಎಂದರು.
ಮಾನಸಿಕ, ಸಾಮಾಜಿಕ ಆರೈಕೆ ಕೇಂದ್ರ ಈಗಾಗಲೇ ಗುಜರಾತ್‌ನಲ್ಲಿ ಕಾರ್ಯಾಚರಣೆಯಲ್ಲಿ ಇದೆ. ಇದರಿಂದ ಅನೇಕ ಉಪಯುಕ್ತ ಫಲಿತಾಂಶ ವ್ಯಕ್ತವಾಗಿದೆ. ಆದ್ದರಿಂದ ಇಂತಹ ಕೇಂದ್ರವನ್ನು ಕರ್ನಾಟಕದಲ್ಲೂ ಸ್ಥಾಪನೆ ಮಾಡುವ ಅಗತ್ಯ ಇದೆ ಎಂದು ಸಲಹೆ ನೀಡಿದರು.
ಬಿ.ಎಸ್ಸಿ. ಮನೋವಿಜ್ಞಾನದ ಪಠ್ಯಕ್ರಮದಲ್ಲಿ ಏಕರೂಪತೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ರಚನೆ ಮಾಡಿರುವ ಸಮಿತಿಯ ಸದಸ್ಯರಾಗಿ ನಾನು ಕಾರ್ಯನಿರ್ವಹಣೆ ಮಾಡಿರುವೆ. ಮುಂದಿನ ದಿನಗಳಲ್ಲಿ ಏಕರೂಪ ಪಠ್ಯಕ್ರಮ ಜಾರಿಯಾಗುವ ಮೂಲಕ ಅಂತರ ಶಿಸ್ತೀಯ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ದೊರೆಯಲಿವೆ ಎಂದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಮನಶಾಸ್ತ್ರವು ಮನುಷ್ಯ ಮತ್ತು ಸಮಾಜದ ನಡುವೆ ಪರಸ್ಪರ ಸಂವಹನಾತ್ಮಕ ಸಂಬಂಧ ಹೊಂದಿದೆ. ಆದ್ದರಿಂದ ಇದು ಪ್ರತಿಯೊಬ್ಬ ವ್ಯಕ್ತಿಗೂ ಹತ್ತಿರದ ವಿಷಯವಾಗಿದೆ. ಮಾನವೀಯತೆ ಮತ್ತು ವಿಜ್ಞಾನವನ್ನು ಬೆಸೆಯುವ ಸಾರ್ಥಕವಾದ ಕಾರ್ಯ ಮನಶಾಸ್ತ್ರ ವಿಷಯದಿಂದ ಸಾಧ್ಯವಿದೆ ಎಂದರು. ಮೈವಿವಿ ಮನೋವಿಜ್ಞಾನ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಸಂಪತ್‌ಕುಮಾರ್ ಇದ್ದರು.