ಜಿಲ್ಲೆ

ಪ್ರತಿ ಕ್ವಿಂಟಲ್ ಹೆಸರು ಖರೀದಿಗೆ 7755 ರೂ. ದರ ನಿಗದಿ: ಡಿಸಿ ವೈಶಾಲಿ

ವಿಜಯವಾಣಿ ಸುದ್ದಿಜಾಲ ಗದಗ
ಬೆಂಬಲ ಬೆಲೆ ಯೋಜನೆಯಡಿ  ಹೆಸರು ಕಾಳು ಖರೀದಿಗೆ ಸರ್ಕಾರ ಆದೇಶಿಸಿದೆ. ಶೀಘ್ರವೇ ಜಿಲ್ಲೆಯಲ್ಲಿ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು ರೈತರು ಬೆಳೆದ ಹೆಸರು ಕಾಳು ಖರೀದಿಸಲು  ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ  ಮಂಗಳವಾರ  ಆಯೋಜಿಸಿದ್ದ ಕೇಂದ್ರ ಸರ್ಕಾರದ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹೆಸರು ಉತ್ಪನ್ನ ಖರೀದಿಸುವ ಜಿಲ್ಲಾ ಟಾಸ್ಕ್ ಫೋರ್ಸ್​ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಬೆಂಬಲ ಬೆಲೆಯ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಅಳವಡಿಸಬೇಕು. ಕರಪತ್ರಗಳ ಮುದ್ರಣ ಸೇರಿದಂತೆ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದರ ಲಾಭ ಪಡೆದುಕೊಳ್ಳುವಂತೆ ಕ್ರಮ ವಹಿಸಬೇಕೆಂದು ಸೂಚಿಸಿದರು.
ಸರ್ಕಾರದ ಆದೇಶದ ದಿನದಿಂದ ರೈತರ ನೋಂದಣಿ 45 ದಿನಗಳವರೆಗೆ ಹಾಗೂ ನೋಂದಣಿ ಕಾರ್ಯದ ಜತೆಯಲ್ಲಿಯೇ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿ ರಾಜ್ಯದಲ್ಲಿ ಮಾರ್ಕ ಪೆಡ್ ಸಂಸ್ಥೆಯ ಮೂಲಕ ಖರೀದಿಸಲು ಸರ್ಕಾರ ತಿಳಿಸಿದೆ. ನೋಂದಣಿ  ಮಾಡಿಸಿದ ರೈತರುಗಳಿಗೆ ನಿಗದಿತ ದಿನದಂದು ಹೆಸರು ಹುಟ್ಟುವಳಿ ತರಲು ಸೂಚಿಸಬೇಕು ಎಂದರು.      
ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ  ಬಿ.ಕೆ.ಲಕ್ಷಾಮಿ ಅವರು ಸಭೆಗೆ ಮಾಹಿತಿ ನೀಡಿ, ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿ ಮಾರ್ಕಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ  ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಕಲಬುರಗಿ ಸಂಸ್ಥೆಗಳನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ಗುರುತಿಸಲಾಗಿದೆ ಎಂದರು.  
 ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಹುಟ್ಟುವಳಿಯನ್ನು ಬೆಳೆದಿದ್ದು ಗದಗ, ನರಗುಂದ, ರೋಣ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಮಾರುಕಟ್ಟೆ ಸಮಿತಿಗಳಲ್ಲಿ ಹೆಸರು ಹುಟ್ಟುವಳಿಯ ಆವಕ ಆಗುತ್ತಿದ್ದು ಮಾರುಕಟ್ಟೆ ದರವು ಪ್ರತಿ ಕ್ವಿಂಟಲ್‍ಗೆ 3000 ರಿಂದ 7200 ರೂ. ರವರೆಗೆ ಇದ್ದು, ಸರಾಸರಿ 6000 ರೂ. ಇದೆ. ಹೆಸರು ಹುಟ್ಟುವಳಿಗೆ ಪ್ರತಿ ಕ್ವಿಂಟಲ್‍ಗೆ 7755 ರೂ. ಗಳಂತೆ ಕನಿಷ್ಟ ಬೆಂಬಲ ಬೆಲೆ ನಿಗದಿಪಡಿಸಿದೆ.  ಪ್ರಸ್ತುತ ಮಾರುಕಟ್ಟೆ ದರವು ಕೇಂದ್ರ ಸರ್ಕಾರವು ನಿಗದಿಪಡಿಸಿದ ಬೆಂಬಲ ಬೆಲೆಗಿಂತ ಕಡಿಮೆ ಇದೆ. ಜಿಲ್ಲೆಯ 54 ಕಡೆಗಳಲ್ಲಿ ಹೆಸರು ಹುಟ್ಟುವಳಿ ಕೇಂದ್ರ ತೆರೆಯಲು ಸ್ಥಳ  ಗುರುತಿಸಲಾಗಿದೆ ಎಂದರು.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಂ.ಬಿ. ಬಿರಾದಾರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.