ಜಿಲ್ಲೆ

ಪ್ರತಿ ಕುಟುಂಬಕ್ಕೆ ವಾರ್ಷಿಕ ೧೦೦ ದಿನ ಕೆಲಸ

ಹುಲಸೂರ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುವ ಗಂಡು ಮತ್ತು ಹೆಣ್ಣು ಕೂಲಿಕಾರರಿಗೆ ೩೧೬ ರೂ. ಸಮಾನ ಕೂಲಿ ದರ ಇದ್ದು, ಒಂದು ಕುಟುಂಬಕ್ಕೆ ವಾರ್ಷಿಕ ೧೦೦ ದಿನ ಕೆಲಸ ನೀಡಲಾಗುವುದು ಎಂದು ತಾಪಂ ಸಹಾಯಕ ನಿರ್ದೇಶಕ ಮಹಾದೇವ ಎಲ್. ಜಮ್ಮು ಹೇಳಿದರು.

ಮಹಾತ್ಮ ಗಾಂಧಿ ನರೇಗಾ ಯೋಜನೆಯ ೨೦೨೪-೨೫ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ತಾಲೂಕಿನ ಗಡಿಗೌಂಡಗಾಂವ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಅಭಿಯಾನಕ್ಕೆ ಚಾಲನೆ ಮತ್ತು ರೋಜಗಾರ ದಿನಾಚರಣೆಯಲ್ಲಿ ಮಾತನಾಡಿದರು.

ಅಭಿಯಾನದ ನಿಮಿತ್ತ ಅ.೨ರಿಂದ ೩೧ರವರೆಗೆ ಗ್ರಾಪಂ ಸಿಬ್ಬಂದಿ ತಮ್ಮ ವ್ಯಾಪ್ತಿಯ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಯೋಜನೆ ಕುರಿತು ಮಾಹಿತಿ ನೀಡಬೇಕು. ರೈತಾಪಿ ಜನರಿಗೆ ಹಾಗೂ ಸಾರ್ವಜನಿಕರಿಗೆ ನರೇಗಾದಲ್ಲಿ ಹಲವು ವೈಯಕ್ತಿಕ ಸೌಲಭ್ಯಗಳಿದ್ದು, ಇದರ ಲಾಭ ಪಡೆಯಲು ಪ್ರೇರಣೆ ನೀಡಬೇಕು ಎಂದರು.

ಗ್ರಾಪಂ ಪಿಡಿಒ ಬಸವರಾಜ ಸಂಕಗೊಂಡ ಮಾತನಾಡಿ, ಕೂಲಿಕಾರರು ವಲಸೆ ಹೋಗದೆ ಸ್ವಗ್ರಾಮದಲ್ಲಿ ನರೇಗಾದಡಿ ಕೆಲಸ ಮಾಡಬೇಕು. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.೫೦ ರಿಯಾಯಿತಿ ಇದೆ. ಅಭಿಯಾನದುದ್ದಕ್ಕೂ ಕೂಲಿಕಾರರಿಂದ ಕೂಲಿ ಬೇಡಿಕೆ ಹಾಗೂ ಸಾರ್ವಜನಿಕರಿಂದ ಕಾಮಗಾರಿ ಬೇಡಿಕೆ ಸ್ವೀಕರಿಸಲಾಗುವುದು. ಈ ಕುರಿತು ವಾರ್ಡ್ ಸಭೆ ಹಾಗೂ ಗ್ರಾಮ ಸಭೆ ಆಯೋಜಿಸಲಾಗುವುದು ಎಂದರು. ರೋಜಗಾರ್ ದಿವಸ್ ಆಚರಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಸಂತೋಷ ಫುಲೆ ಇತರರಿದ್ದರು.