ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡರೂ ಆ ಪಕ್ಷಗಳಿಗೆ ಏನೂ ಪ್ರಯೋಜನವಾಗುವುದಿಲ್ಲ. ಇವರಿಬ್ಬರ ಮೈತ್ರಿಯಿಂದ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ವಿಧಾನಸಭೆ ಚುನಾವಣೆಗಿಂತ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಕಾಂಗ್ರೆಸ್‌ಗೆ ದೊರೆಯಲಿವೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ 22 ರಿಂದ 25 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ಪ್ರತಾಪ್‌ಸಿಂಹ ಸೋಲಿನ ಭೀತಿಯಲ್ಲಿ ಕಂಡ ಕಂಡವರ ಕಾಲು ಹಿಡಿಯುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರು ನೂರಕ್ಕೆ ನೂರಷ್ಟು ಸೋಲುತ್ತಾರೆ. ಒಂದು ವೇಳೆ ಅವರೇನಾದರೂ ಗೆದ್ದರೆ ನಾನು ಊರು ಬಿಟ್ಟು ಬಿಡುತ್ತೇನೆ ಎಂದು ಸವಾಲು ಹಾಕಿದರು.
ಜನರನ್ನು ದಿಕ್ಕು ತಪ್ಪಿಸಲು ಮಹಿಷ ದಸರಾ ಆಚರಣೆ ಮಾಡಲು ಬಿಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗ ಪೊಲೀಸರ ಮೂಲಕ ಗೂಂಡಾಗಿರಿಯಂತೆ ಜನರನ್ನು ತಡೆದು ಮಹಿಷ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಿಸಲಾಗಿತ್ತು. ಇಷ್ಟೆಲ್ಲಾ ಮಾತನಾಡುವವರು ಚಾಮುಂಡೇಶ್ವರಿ ಬೆಟ್ಟದ ಪ್ರವೇಶ ದ್ವಾರದ ಆರಂಭದಲ್ಲಿಯೇ ಏಕೆ ಮಹಿಷಾಸುರನ ಪ್ರತಿಮೆ ನಿರ್ಮಾಣ ಮಾಡಿದ್ದಾರೆ ಎನ್ನುವುದನ್ನು ಪ್ರತಾಪಸಿಂಹ ಹೇಳಲಿ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ಅಗಿರುವ ಅನಾಚಾರ ಸರಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಒಂದು ವರ್ಷ ಕಾಲಾವಕಾಶ ಬೇಕಿದೆ. ಇವರ ಅನಾಚಾರಕ್ಕೆ ಮೈಸೂರು ವಿವಿ ಕುಲಪತಿ ನೇಮಕ ರದ್ದಾಗಿರುವುದೇ ಸಾಕ್ಷಿಯಾಗಿದೆ. ಈ ಮೂಲಕ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕಳಂಕ ತಂದಿದ್ದೀರಿ. ಖಜಾನೆ ಖಾಲಿ ಮಾಡಿರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸುತ್ತಿರುವ ಸಿದ್ದರಾಮಯ್ಯ ಸರ್ಕಾರದ ನಡೆಗೆ ಆರ್ಥಿಕ ತಜ್ಞರೇ ಹೊಗಳಿದ್ದಾರೆ ಎಂದರು.
ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ, ಯಾರೋ ನನಗೆ ಮೊಬೈಲ್ ಕರೆ ಮಾಡಿ ಧಮ್ಕಿ ಹಾಕ್ತಿದ್ದಾರೆ. ಅಭಿಪ್ರಾಯವನ್ನು ಹೇಳುವ ಸ್ವಾತಂತ್ರೃವೂ ಪ್ರಜಾಪ್ರಭುತ್ವದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
ಮುಂಗಾರು ಬಹಳ ವಿಫಲವಾಗಿರುವ ಕುರಿತು ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರಕ್ಕೆ ಅಫಿಡವಿಟ್ ಸಲ್ಲಿಸಲಾಗಿದೆ. ತಂಡವನ್ನು ಕಳುಹಿಸಿಕೊಟ್ಟು ವಾಸ್ತವ ಪರಿಶೀಲನೆ ನಡೆಸುವಂತೆ ಮಾಡಬೇಕು. ಕೇಂದ್ರವು ನಮ್ಮ ರೈತರಿಗೂ ಪರಿಹಾರ ಕೊಡಬೇಕು. ನಿಜವಾಗಿಯೂ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ-ಜೆಡಿಎಸ್ ವಾಸ್ತವ ಮಾತನಾಡಲಿ. ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಟ್ಟು ಕೇಂದ್ರದಲ್ಲಿ ರಾಜ್ಯದ 25 ಸಂಸದರು ಧ್ವನಿ ಎತ್ತಲಿ ಎಂದರು.
ಲೋಕಸಭಾ ಚುನಾವಣೆಗೆ ನಾನೂ ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಯತೀಂದ್ರ ಸಿದ್ದರಾಮಯ್ಯ ಸ್ಪರ್ಧಿಸಿದರೆ ಮುಕ್ತ ಮನಸ್ಸಿನಿಂದ ಸಂಪೂರ್ಣ ಬೆಂಬಲ ನೀಡಲಾಗುವುದು. ಈ ಬಾರಿ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗೋಪಾಲಗೌಡ ಆಸ್ಪತ್ರೆಯ ಡಾ.ಸುಶ್ರುತ್, ಮುಖಂಡ ಜೆ.ಜೆ. ಆನಂದ್ ಸೇರಿದಂತೆ ಹಲವರು ಆಕಾಂಕ್ಷಿಗಳು ಎಂದು ಫ್ಲೆಕ್ಸ್, ಬ್ಯಾನರ್ ಹಾಕಿಕೊಂಡಿದ್ದಾರೆ. ಭಾರತ್ ಜೋಡೋನಲ್ಲಿ ಲಕ್ಷಾಂತರ ಜನರು ಹೆಜ್ಜೆ ಹಾಕಿದ್ದಾರೆ. ಫ್ಲೆಕ್ಸ್, ಬ್ಯಾನರ್ ಹಾಕಿಕೊಂಡವರಿಗೆಲ್ಲ ಟಿಕೆಟ್ ಕೊಡುವ ಸಂಸ್ಕೃತಿ ಕಾಂಗ್ರೆಸ್‌ನಲ್ಲಿ ಇಲ್ಲ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಮಾಧ್ಯಮ ವಕ್ತಾರ ಮಹೇಶ್ ಇತರರು ಇದ್ದರು.