ರಾಯಚೂರು: ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರ್ಕಾರ ಕೊಳಚೆ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗೆ ಪ್ರತ್ಯೇಕ ಸಚಿವರು ಮತ್ತು ಇಲಾಖೆ ರಚನೆ ಮತ್ತು ಕುಟುಂಬಕ್ಕೊಂದು ಮನೆ ನೀಡುವ ಭರವಸೆಯನ್ನು ಈಡೇರಿಸುವಂತೆ ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿಸಲ್ಲಿ ಸಲ್ಲಿಸಿ, ಬಡವರಿಗಾಗಿ ನಿರ್ಮಿಸುವ ವಸತಿ ಯೋಜನೆಗಳಿಗೆ ರಾಜ್ಯ ಸರ್ಕಾರದಿಂದ 3.50 ಲಕ್ಷ ರೂ. ಸಬ್ಸಿಡಿ ನೀಡುವ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಕೊಳಗೇರಿ ನಿವಾಸಿಗಳು ದುಡಿಮೆಯ ಭದ್ರತೆಯಿಲ್ಲದೆ ಬದುಕುತ್ತಿದ್ದು, ನಿವಾಸಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನ ಕೆಲಸ ಕೊಡುವ ಕಾಯ್ದೆ ಜಾರಿಗೊಳಿಸಬೇಕು. ಕರ್ನಾಟಕ ಕೊಳಗೇರಿ ಅಭಿವೃದ್ಧಿಗೆ ಕಾಯ್ದೆ 2018ರ ಕರಡನ್ನು ರಾಜ್ಯದಲ್ಲಿ ಜಾರಿ ಮಾಡಿ ಸ್ಲಂ ನಿವಾಸಿಗಳಿಗೆ ಸಮಾನತೆ ಒದಗಿಸಬೇಕು.
ರಾಜ್ಯದಲ್ಲಿನ 70 ಲಕ್ಷ ನಿವೇಶನ, ವಸತಿ ರಹಿತರಿಗೆ ಮನೆ ಖಾತ್ರಿ ಮಾಡುವ ವಸತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಬೇಕು. ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಮುಂಬರುವ ಬಜೆಟ್‌ನಲ್ಲಿ 2 ಸಾವಿರ ಕೋಟಿ ರೂ. ಮೀಸಲಿಡಬೇಕು. ಕೊಳಚೆ ಪ್ರದೇಶದಲ್ಲಿನ ಕುಟುಂಬಗಳಿಗೆ ಭೂ ಮಾಲೀಕತ್ವ ನೀಡುವ ಪ್ರಕ್ರಿಯೆ ಚುರುಕುಗೊಳಿಸಬೇಕು.
ನಗರ ಪ್ರದೇಶದಲ್ಲಿನ ಭೂಮಿ ಮರು ಹಂಚಿಕೆ ಮಾಡಲು ನಗರ ಲ್ಯಾಂಡ್ ಬ್ಯಾಂಕ್ ನೀತಿ ಜಾರಿಗೊಳಿಸಬೇಕು. ಸ್ಲಂ ನಿವಾಸಿಗಳಿಗೆ ಅಭಿವೃದ್ಧಿ ನಿಗಮ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ಪದಾಕಾರಿಗಳಾದ ಬಸವರಾಜ, ನೂರ್‌ಜಾನ್, ರಾಜಶೇಖರ ಮಹೇಶ, ಮಾಧವರೆಡ್ಡಿ, ವೀರೇಶ, ನಾಗರಾಜ, ಜಂಬಣ್ಣ, ಜಿ.ರಾಜು ಹಾಗೂ ಸ್ಲಂ ನಿವಾಸಿಗಳು ಪಾಲ್ಗೊಂಡಿದ್ದರು.